ಲಾಕ್‍ಡೌನ್: ಕಲರ್ ಜೆರಾಕ್ಸ್ ಪಾಸ್ ತೆಗೆದು ಸಿಕ್ಕಿಬಿದ್ದರೆ 7 ತಿಂಗಳು ಜೈಲು

ಬೆಂಗಳೂರು: ಒಂದು ಕಡೆ ಸೀಲ್‍ಡೌನ್ ಮಾದರಿ ನಿರ್ಬಂಧ ಹಾಕುತ್ತಿರುವ ಬೆಂಗಳೂರು ಪೊಲೀಸರು, ಅಡ್ಡಾದಿಡ್ಡಿ ಓಡಾಡುತ್ತಿರುವವರಿಗೆ ಮತ್ತಷ್ಟು ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.

ಬೆಂಗಳೂರು ರಸ್ತೆಗಳನ್ನು ಸೀಲ್ ಮಾಡುವುದರ ಜೊತೆಗೆ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಉದ್ದೇಶಿಸಿದ್ದಾರೆ. ಈಗಾಗಲೇ ನೀಡಿರುವ ತುರ್ತು ಕೋವಿಡ್-19 ಪಾಸ್‍ಗಳನ್ನು ಶನಿವಾರದಿಂದ ರದ್ದು ಮಾಡಲು ಬಯಸಿದ್ದಾರೆ. ಇದನ್ನೂ ಓದಿ:  ಬೆಂಗ್ಳೂರಿನ 2 ವಾರ್ಡ್ ಹೊರತುಪಡಿಸಿ ಬೇರೆಲ್ಲೂ ಸೀಲ್‍ಡೌನ್ ಇಲ್ಲ: ಭಾಸ್ಕರ್ ರಾವ್

ಬೆಂಗ್ಳೂರು ಪೊಲೀಸರ ಪ್ಲಾನ್:
ನಗರದಲ್ಲಿ 70,000 ತುರ್ತು ಕೋವಿಡ್-19 ಪಾಸ್, ಆನ್‍ಲೈನ್ 1.30 ಲಕ್ಷ ಪಾಸ್ ವಿತರಣೆ ಮಾಡಲಾಗಿದೆ. ಆದರೆ ದಿನಕ್ಕೆ 3 ಲಕ್ಷಕ್ಕಿಂತ ಹೆಚ್ಚು ವಾಹನ ಓಡಾಡುತ್ತಿವೆ. ಕೆಲವರು ನಕಲಿ ಪಾಸ್ ಮಾಡಿಕೊಂಡು ಅನಾವಶ್ಯಕವಾಗಿ ತಿರುಗಾಡುತ್ತಿದ್ದಾರೆ. ಹೀಗಾಗಿ ಪೊಲೀಸರು ಅಂತವರಿಗೆ ಬಲೆ ಬೀಸಿದ್ದಾರೆ.

ಕಲರ್ ಜೆರಾಕ್ಸ್ ಪಾಸ್ ತೆಗೆದು ಸಿಕ್ಕಿಬಿದ್ದರೆ 7 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಲಿಸಲು ಪೊಲೀಸರು ಯೋಚಿಸಿದ್ದಾರೆ. ದಿನಸಿ, ತರಕಾರಿ ಮಾರಾಟಕ್ಕೆ ಬೆಳಗ್ಗೆ 6ರಿಂದ 12 ಗಂಟೆವರೆಗೆ ಸಮಯ ನಿಗದಿ, ಜನರಿಗೆ ಊಟ ಹಂಚುವವರಿಗೂ ಮಧ್ಯಾಹ್ನ 12 ಗಂಟೆವರೆಗೆ ವಿತರಣೆಗೆ ನಿಬಂಧನೆ ಹಾಗೂ ಸಂಜೆ ನಂತರ ತುರ್ತು ವಾಹನಗಳನ್ನು ಬಿಟ್ಟರೆ ಯಾವುದೇ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲು ಪೊಲೀಸರು ಪ್ಲಾನ್ ರೂಪಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಬೆಂಗಳೂರು ಸೇರಿದಂತೆ ರಾಜ್ಯದ 18 ಜಿಲ್ಲೆಗಳ ಸೀಲ್‍ಡೌನ್‍ನಂಥ ಪರಿಸ್ಥಿತಿ ಇದೆ. ಬೆಂಗಳೂರಿನ ವಿಜಯನಗರ, ಬಿಟಿಎಂ ಲೇಔಟ್, ಫ್ರೇಜರ್‍ಟೌನ್, ಕಮರ್ಷಿಲ್ ಸ್ಟ್ರೀಟ್‍ಗಳಲ್ಲಿ ಪೊಲೀಸರು ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್, ಮರಗಳನ್ನು ಕಟ್ಟಿ ಬಂದ್ ಮಾಡಿದ್ದಾರೆ. ಮೈಸೂರಿನಲ್ಲೂ ಎಲ್ಲಾ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗುತ್ತಿದೆ. ಜನ ಹೊರಬಾರದಂತೆ ತಡೆಯಲು ಬಡಾವಣೆಗಳನ್ನು ಬ್ಲಾಕ್ ಮಾಡಲಾಗುತ್ತಿದೆ.

ಕೊರೊನಾ ರೆಡ್‍ಝೋನ್‍ನಲ್ಲಿರುವ ಮಂಡ್ಯದಲ್ಲೂ ಶನಿವಾರದಿಂದ ಮಾರುಕಟ್ಟೆಗಳನ್ನು ಬಂದ್ ಮಾಡಲಾಗುತ್ತಿದೆ. ಬೀದಿಗೆ ಒಬ್ಬ ತರಕಾರಿ ಮಾರಾಟಗಾರನಿಗೆ ಪಾಸ್ ವಿತರಣೆ ಮಾಡಲಾಗಿದೆ. ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲೂ ಸೀಲ್‍ಡೌನ್‍ಗೆ ಸಿದ್ಧತೆ ನಡೆದಿದೆ. ಮಂಗಳೂರಿನ ತೊಕ್ಕೊಟ್ಟು ಪ್ರದೇಶದಲ್ಲಿ ಯಾರಿಗೂ ಎಂಟ್ರಿಯಿಲ್ಲ. ಕಲಬುರಗಿ ನಗರದ ಬಹುತೇಕ ರಸ್ತೆಗಳಲ್ಲಿ ಪೊಲೀಸ್ ಬ್ಯಾರಿಕೇಡ್ ಹಾಕಲಾಗಿದ್ದು, ರಸ್ತೆ ಸಂಚಾರ ವ್ಯವಸ್ಥೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

ಗದಗದಲ್ಲಿ ವೃದ್ಧೆ ಮೃತಪಟ್ಟ ಹಿನ್ನೆಲೆಯಲ್ಲಿ ಸೀಲ್‍ಡೌನ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿದೆ. ಬೀದರ್, ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಕೊಡಗು, ತುಮಕೂರು ಸೇರಿದಂತೆ ಒಟ್ಟು 18 ಜಿಲ್ಲೆಗಳಲ್ಲಿ ಸೀಲ್‍ಡೌನ್ ಮಾಡಲು ಸಿದ್ಧತೆ ನಡೆಯುತ್ತಿದೆ.

Comments

Leave a Reply

Your email address will not be published. Required fields are marked *