ಸಿಕ್ಕ ಸಿಕ್ಕ ವಾಹನ, ಕಾಲ್ನಡಿಗೆ ಮೂಲಕ ತಮ್ಮೂರಿಗೆ ಹೊರಟ ಜನ

– ಜೀವನೋಪಾಯದ ಬಿಕ್ಕಟ್ಟಿಗೆ ಸಿಲುಕಿದ ಕಾರ್ಮಿಕರು

ಅಹಮದಾಬಾದ್: ಕೊರೊನಾ ವೈರಸ್ ಹಿನ್ನೆಲೆ ದೇಶದಲ್ಲಿ ಲಾಕ್‍ಡೌನ್ ಘೋಷಿಸಿದ್ದರಿಂದ ಗುಜರಾತ್‍ನಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನದ ಸಾವಿರಾರು ಕಾರ್ಮಿಕರಿಗೆ ಜೀವನೋಪಾಯದ ಬಿಕ್ಕಟ್ಟು ಉಂಟಾಗಿದೆ.

ಗುಜರಾತ್‍ನ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಬಸ್, ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ಕಾಲ್ನಡಿಗೆಯಲ್ಲೇ ತಮ್ಮ ಮನೆಗಳಿಗೆ ತೆರಳಿದ್ದಾರೆ. ಕೆಲವರು ಪತ್ನಿ ಮತ್ತು ಮಕ್ಕಳೊಂದಿಗೆ ಸೈಕಲ್‍ಗಳಲ್ಲಿ ಹೋಗುತ್ತಿದ್ದಾರೆ. ಕೆಲವರಂತೂ ಸಿಕ್ಕ ಸಿಕ್ಕ ಲಾರಿ ಏರಿ ತಮ್ಮೂರಿಗೆ ತೆರಳುತ್ತಿದ್ದಾರೆ.

ಲಾಕ್‍ಡೌನ್‍ನಿಂದಾಗಿ ಗುಜರಾತ್‍ನಲ್ಲಿ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕಾರ್ಖಾನೆಗಳು ಸ್ತಬ್ಧವಾಗಿವೆ. ಪರಿಣಾಮ ಕಾರ್ಮಿಕರು ಭಾರೀ ಕಷ್ಟಕ್ಕೆ ಸಿಲುಕಿ, ತಮ್ಮೂರಿಗೆ ಮರಳುತ್ತಿದ್ದಾರೆ.

ಕೆಲಸವಿಲ್ಲ, ಹಣವಿಲ್ಲ:
ನಾನು ನನ್ನ ಸಹೋದರನೊಂದಿಗೆ ಅಹಮದಾಬಾದ್‍ನ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದೇವು. ನಮ್ಮ ಕುಟುಂಬ ಒಟ್ಟಿಗೆ ಇದೆ. ಆದರೆ ಲಾಕ್‍ಡೌನ್‍ನಿಂದಾಗಿ ಕೆಲಸವಿಲ್ಲದಿದ್ದರೆ ಹಣವಿಲ್ಲ ಎಂದು ಗುತ್ತಿಗೆದಾರ ಹೇಳಿದರು. ಹೀಗಾಗಿ ಜೀವನ ನಡೆಸುವುದು ಕಷ್ಟವಾಗಿ ಊರಿಗೆ ಮರಳುತ್ತಿದ್ದೇವೆ ಎಂದು ರಾಜಸ್ಥಾನದ ವ್ಯಕ್ತಿಯೊಬ್ಬರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಪ್ರತಿ ತಿಂಗಳು 9ರಿಂದ 10 ಸಾವಿರ ರೂ. ಗಳಿಸುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲೇ ಉಳಿದರೆ ಇಲ್ಲಿಯವರೆಗೂ ಗಳಿಸಿದ ಹಣ ಖರ್ಚಾಗುತ್ತದೆ. ಕೊರೊನಾ ನಮ್ಮ ಜೀವನೋಪಾಯದ ಮೇಲೆ ಭಾರೀ ಹೊಡೆತ ಕೊಟ್ಟಿದೆ ಎಂದು ಗೂಳೆ ಹೊರಟ ಜನರು ಕಣ್ಣೀರಿಟ್ಟಿದ್ದಾರೆ.

ರಾಜಸ್ಥಾನದ ಕೆಲವರು ಚಹಾ ಅಂಗಡಿಗಳು ಮತ್ತು ಆಹಾರ ಮಳಿಗೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಗ್ರಾಮಗಳಿಗೆ ಹೋಗುತ್ತಿರುವ ಜನರಿಗೆ ಮಾರ್ಗ ಮಧ್ಯದಲ್ಲಿ ಪೊಲೀಸರು ಆಹಾರ ಹಾಗೂ ಪಾನೀಯ ವಿತರಿಸಿ ಮಾನವೀಯತೆ ಮೆರೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *