ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ, ಬಡವರನ್ನು ಬದುಕಿಸಿಕೊಳ್ಳಲು ಸ್ಥಿತಿವಂತರು ಸಹಾಯ ಮಾಡಿ: ಡಿಸಿಎಂ ಕಾರಜೋಳ

ಚಿತ್ರದುರ್ಗ: ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ. ಸ್ಥಿತಿವಂತರು ಬಡವರನ್ನು ಬದುಕಿಸಿಕೊಳ್ಳಲು ಆರ್ಥಿಕ ಸಹಾಯ ಮಾಡಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕೇಳಿಕೊಂಡಿದ್ದಾರೆ.

ಚಿತ್ರದುರ್ಗದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ನೆರೆ ಹಾವಳಿ, ಬರಗಾಲ ಸೇರಿದಂತೆ ಒಂದಲ್ಲಾ ಒಂದು ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದ್ದೇವೆ. ಇದೆಲ್ಲವನ್ನೂ ಮುಗಿಸಿಕೊಂಡು 2020ರಲ್ಲಿ ಹೊಸ ಹೊಸ ಯೋಜನೆಗಳನ್ನು ರೂಪಿಸೋಣ ಎಂದಾಗ ಈ ಮಹಾಮಾರಿ ಕೊರೊನಾ ವೈರಸ್ ಅಂಟಿಕೊಂಡಿದೆ. ಈ ಕೊರೊನಾ ನಿರ್ಮೂಲನೆ ಮಾಡಲು ದೇಶ ಸೇರಿದಂತೆ ವಿಶ್ವವೇ ನಲುಗಿ ಹೋಗಿದ್ದು, ಲಾಕ್‍ಡೌನ್‍ನಿಂದಾಗಿ ಎಲ್ಲಾ ದೇಶಗಳು ಆರ್ಥಿಕವಾಗಿ ಸಂಕಷ್ಟವನ್ನು ಅನುಭವಿಸುತ್ತಿವೆ. ಅದರಂತೆ ನಮ್ಮ ರಾಜ್ಯವೂ ಕೂಡ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ ಎಂದರು.

ರಾಜ್ಯವನ್ನು ಕೊರೊನಾ ಮುಕ್ತ ಮಾಡಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸ್ಥಿತಿವಂತರು ಸಹಕಾರ ಮಾಡಿ ಎಂದು ಹೇಳಲಾಗಿದೆ ಹೊರೆತು ಯಾರ ಮೇಲೂ ಒತ್ತಡ ಹಾಕಲಾಗಿಲ್ಲ. ಇದಕ್ಕೆ ಪೊಲೀಸ್ ಇಲಾಖೆಯಲ್ಲಿ ಕೆಲವರು ಏಕೆ ಕೊಡಬೇಕು ಎಂದು ಕೇಳಿದ್ದಾರೆ ಅಂತಹವರನ್ನು ಒತ್ತಾಯ ಮಾಡುವುದಿಲ್ಲ ಎಂದು ಹೇಳಿದರು. ಸಿಎಂ ಪರಿಹಾರ ನಿಧಿಗೆ ಈಗಾಗಲೇ 130 ಕೋಟಿ ಬಂದಿದೆ. ಕಠಿಣ ಪರಿಸ್ಥಿತಿಯಲ್ಲಿ ಪರಸ್ಪರ ಸಹಕಾರ ನೀಡಿ ಎಲ್ಲಾ ರೀತಿಯಿಂದಲೂ ಸಹಾಯ ಮಾಡಿ ಎಂದು ಕೇಳಿದ್ದೇವೆ ಎಂದು ಹೇಳಿದರು.

ಇದೇ ವೇಳೆ ಚಿತ್ರದುರ್ಗದ ಆಹಾರ ಇಲಾಖೆ ಅಧಿಕಾರಿಗಳು ಜನರಿಗೆ ತಾತ್ಕಾಲಿಕ ರೇಷನ್ ಕಾರ್ಡ್ ವಿತರಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆಂಬ ವಿಷಯ ತಿಳಿದು ಡಿಸಿಎಂ ಗರಂ ಆದರು. ತಕ್ಷಣ ಚಿತ್ರದುರ್ಗ ಜಿಲ್ಲೆಯ ಆಹಾರ ಇಲಾಖೆ ಉಪನಿರ್ದೇಶಕ ಮಧುಸೂಧನ್ ಅವರಿಗೆ ಕರೆಮಾಡಿ ತರಾಟೆ ತೆಗೆದುಕೊಂಡರು. ಕ್ಯಾಬಿನೆಟ್‍ನಲ್ಲಿ ತೀರ್ಮಾನಿಸಿರುವಂತೆ ಕೂಡಲೇ ತಾತ್ಕಾಲಿಕ ಕಾರ್ಡ್ ವಿತರಿಸಿ ಪಡಿತರವನ್ನು ನೀಡಿ ಎಂದು ಸೂಚಿಸಿದರು.

Comments

Leave a Reply

Your email address will not be published. Required fields are marked *