– ಮಾಹಿತಿಗಾಗಿ ಅಧಿಕಾರಿಗಳ ಹರಸಾಹಸ
– ಹೊಂಗಸಂದ್ರದ 1,271 ಮನೆಗಳ 3,400 ಜನರ ತಪಾಸಣೆ
ಬೆಂಗಳೂರು: ಹೊಂಗಸಂದ್ರಕ್ಕೆ ಕೊರೊನಾ ಹಬ್ಬಿಸಿದ ಸೋಂಕಿತ ವ್ಯಕ್ತಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೊರೊನಾ ವಿರುದ್ಧ ಹೋರಾಟ ಮಾಡಲು ಸೆಣಸಾಡುತ್ತಿದ್ದಾರೆ.
ರೋಗಿ ನಂಬರ್ 419ರ ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿಲ್ಲ. ಇವರ ಆರೋಗ್ಯ ತೀವ್ರ ಹದಗೆಡುತ್ತಲೇ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯ್ಲಲ್ಲಿ ಆತ ಎಲ್ಲೆಲ್ಲಿಗೆ ಭೇಟಿ ನೀಡಿದ್ದ, ಯಾರ ಯಾರ ಸಂಪರ್ಕಕ್ಕೆ ಬಂದಿದ್ದ ಅನ್ನೋದನ್ನ ತಿಳಿಯಲು ಆರೋಗ್ಯ ಇಲಾಖೆ ಹರಸಾಹಸ ಪಡುತ್ತಿದೆ.

ಸೋಂಕಿತ ಮಾತನಾಡುವ ಸ್ಥಿತಿಯಲ್ಲಿರದ ಕಾರಣ ಮಾಹಿತಿ ಕಲೆಹಾಕಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ವೆಂಟಿಲೇಟರ್ ಮೂಲಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸೋಂಕಿತ ವ್ಯಕ್ತಿಗೆ ಉಸಿರಾಟವೇ ದೊಡ್ಡ ಸವಾಲಾಗಿದೆ.
ರೋಗಿ ನಂಬರ್ 419 ಬಿಹಾರಿ ಮೂಲದ ಹೊಂಗಸಂದ್ರ ವ್ಯಕ್ತಿಯಾಗಿದ್ದು, ಇದುವರೆಗೆ ಈತನಿಂದ 37 ಮಂದಿಗೆ ಕೊರೊನಾ ಸೋಂಕು ಬಂದಿದೆ ಎಂದು ಬಿಬಿಎಂಪಿ ವಾರ್ ರೂಂ ರಿಪೋರ್ಟ್ ನೀಡುತ್ತಿದೆ. ರಾಜ್ಯದಲ್ಲೇ ಅತಿಹೆಚ್ಚು ಜನರಿಗೆ ಕೊರೊನಾ ಹಚ್ಚಿದ 3ನೇ ವ್ಯಕ್ತಿಯಾಗಿದ್ದು, ಪರಿಣಾಮ ಹೊಂಗಸಂದ್ರದಲ್ಲಿ ಜನರಲ್ಲಿ ಆತಂಕ ಉಂಟಾಗಿದೆ.

ಈವರೆಗೆ ಹೊಂಗಸಂದ್ರದ 1,271 ಮನೆಗಳ 3,400 ಜನರ ತಪಾಸಣೆಯಾಗಿದೆ. ಈ 3,400 ಜನರಲ್ಲಿ ಯಾರಿಗೂ ಪಾಸಿಟಿವ್ ಬಂದಿಲ್ಲ. ಆದರೂ ಹೊಂಗಸಂದ್ರದಲ್ಲಿ ಆತಂಕ ಮುಂದುವರಿದಿದೆ. ಸದ್ಯ ಹೊಂಗಸಂದ್ರದ ನಂಬರ್ 419 ಚೇತರಿಕೆಗಾಗಿ ಆರೋಗ್ಯಾಧಿಕಾರಿಗಳು ಕಾಯುತ್ತಿದ್ದಾರೆ. ಈ ರೋಗಿಗೆ 54 ವರ್ಷವಾಗಿದ್ದು, ಇದು ವೈದ್ಯರಿಗೆ ಸವಾಲಾಗಿದೆ.

Leave a Reply