ವ್ಯಾಪಾರ ಮಳಿಗೆಯಲ್ಲಿನ ಎಲ್ಲಾ ಆಫರ್‌ಗಳಿಗೆ ಬ್ರೇಕ್

– ಪಿಜಿ, ಹಾಸ್ಟೆಲ್‍ನಿಂದ ಮನೆಗೆ ತೆರಳಲು ಸೂಚನೆ

ಮೈಸೂರು: ಕೊರೊನಾ ವೈರಸ್ ಸೋಂಕು ಭೀತಿ ಹಿನ್ನೆಲೆಯಲ್ಲಿ ಮೈಸೂರಿನ ವ್ಯಾಪಾರ ಮಳಿಗೆಯ ಎಲ್ಲಾ ರೀತಿಯ ಆಫರ್‌ಗಳಿಗೆ ಬ್ರೇಕ್ ಹಾಕಲಾಗಿದೆ. ಜನದಟ್ಟಣೆ ಕಡಿಮೆ ಮಾಡಲು ಟೋಕನ್ ಜಾರಿಗೊಳಿಸಲು ಮೈಸೂರು ಜಿಲ್ಲಾಡಳಿತದಿಂದ ಸೂಚನೆ ನೀಡಲಾಗಿದೆ.

ಎಲ್ಲಾ ವ್ಯಾಪಾರ ಮಳಿಗೆಯಲ್ಲಿ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ್ ಬಳಕೆಗೆ ಸೂಚಿಸಲಾಗಿದೆ. ಅಲ್ಲದೇ ಡೋರ್ ಹ್ಯಾಂಡಲ್ಸ್, ನೆಲ, ಟೇಬಲ್ ಕೌಂಟರ್ ಸೇರಿ ಎಲ್ಲವನ್ನೂ ಬ್ಲೀಚಿಂಗ್ ಪೌಡರ್ ಹಾಕಿ ಸ್ವಚ್ಛಗೊಳಿಸಬೇಕು. ಮಳಿಗೆಯ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವುದು. ಕೆಮ್ಮು, ಜ್ವರ, ಶೀತ ಅಥವಾ ಉಸಿರಾಟದ ತೊಂದರೆಯಿರುವವರಿಗೆ ಅನಾರೋಗ್ಯದ ರಜೆ ನೀಡುವುದು. ಪ್ಲಾಸ್ಟಿಕ್ ರಹಿತ ಜಾಗೃತ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೂಚಿಸಿದ್ದಾರೆ.

ಅಲ್ಲದೇ ಹೆಚ್ಚು ಜನ ಗ್ರಾಹಕರು ಕ್ಯೂನಲ್ಲಿ ನಿಲ್ಲದಂತೆ ನೋಡಿಕೊಳ್ಳಬೇಕು. ಗ್ರಾಹಕರು ನೇರವಾಗಿ ಯಾವುದೇ ವಸ್ತುಗಳನ್ನು ಮುಟ್ಟದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಇತ್ತ ಮೈಸೂರಿನ ಪಿಜಿ ಹಾಸ್ಟೆಲ್ ವಿದ್ಯಾರ್ಥಿಗಳು ವಾಪಸ್ ಮನೆಗೆ ತೆರಳಲು ಮೈಸೂರು ಜಿಲ್ಲಾಡಳಿತ ಸೂಚಿಸಿದೆ. ರಜೆ ಸಿಕ್ಕಿದ್ದರೆ ಮನೆಗೆ ತೆರಳಬೇಕು. ಒಂದು ವೇಳೆ ಪಿಜಿಯಲ್ಲೇ ಉಳಿಯುವುದಾದರೆ ವೈಯಕ್ತಿಕ ನೈರ್ಮಲ್ಯ ಕ್ರಮ ಪಾಲಿಸಿ ಎಂದು ಸೂಚಿಸಲಾಗಿದೆ.

ಪಿಜಿಯನ್ನು ಸ್ವಚ್ಚವಾಗಿಟ್ಟುಕೊಳ್ಳಲು ಮಾಲೀಕರಿಗೆ ಸೂಚನೆ ನೀಡಿದ್ದೇವೆ. ರೂಮ್‍ಗಳಲ್ಲಿ ಹೆಚ್ಚಿನ ಜನ ಇರದಂತೆ ನೋಡಿಕೊಳ್ಳಬೇಕು. ಅಲ್ಲದೇ ಪಿಜಿಯಿಂದ ಬಲವಂತವಾಗಿ ಯಾರನ್ನು ಹೊರಗೆ ಕಳುಹಿಸಬಾರದು. ಪರ್ಯಾಯ ವ್ಯವಸ್ಥೆಗೆ ಸೂಕ್ತ ಸಮಯ ನೀಡಬೇಕು. ಒಂದು ವೇಳೆ ಸರ್ಕಾರದ ನಿರ್ದೇಶನ ಪಾಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳವುದಾಗಿ ಶಂಕರ್ ಎಚ್ಚರಿಸಿದ್ದಾರೆ.

Comments

Leave a Reply

Your email address will not be published. Required fields are marked *