ಮುಳ್ಳಯ್ಯನಗಿರಿಗೆ ‘ಸಿಂಗಲ್ ಪರ್ಸನ್’ ಟೂರಿಸ್ಟ್ ಇಲ್ಲ- 30 ವರ್ಷದಲ್ಲಿ ಇದೇ ಮೊದ್ಲು

ಚಿಕ್ಕಮಗಳೂರು: ಕೊರೊನಾ ವೈರಸ್‍ನಿಂದ ಕಾಫಿನಾಡಿನ ಮೇಲೆ ತುಂಬಾ ಪರಿಣಾಮ ಬೀರಿದೆ. ಯಾಕೆಂದರೆ ಮೂರು ದಶಕಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಗೆ ಒಬ್ಬನೇ ಒಬ್ಬ, ಸಿಂಗಲ್ ಪರ್ಸನ್ ಪ್ರವಾಸಿಗ ಸಹ ಬರಲಿಲ್ಲ.

ಕಾಫಿನಾಡಿನ ತುಂಬು ಮುತ್ತೈದೆಯಂತಿರೋ ಹಚ್ಚ ಹಸಿರಿನ ಸೊಬಗನ್ನ ಸವಿಯಲು ಪ್ರವಾಸಿಗರಿಲ್ಲದ ದಿನ ಇರಲಿಲ್ಲ. ಯುಗಾದಿ, ದೀಪಾವಳಿ, ಕ್ರಿಸ್‍ಮಸ್, ರಂಜಾನ್ ಯಾವುದೆ ದಿನವಾದರೂ ಜಿಲ್ಲೆಯ ಮುಳ್ಳಯ್ಯನಗಿರಿ, ದತ್ತಪೀಠ, ಮಾಣಿಕ್ಯಧಾರ ಸೇರಿದಂತೆ ಬಹುತೇಕ ಪ್ರವಾಸಿ ಸ್ಥಳಗಳಲ್ಲಿ ಜನ ಇರುತ್ತಿದ್ದರು. ಕನಿಷ್ಠ 100 ಜನರಾದರೂ ಇರುತ್ತಿದ್ದರು. ಆದರೆ ಕೊರೊನಾದ ಕರಿನೆರಳಿಗೆ ಕರ್ನಾಟಕದ ಅತ್ಯಂತ ಎತ್ತರದ ಶಿಖರ ಎಂದೇ ಖ್ಯಾತಿಯಾಗಿರೋ ಮುಳ್ಳಯ್ಯನಗಿರಿಗೂ ಅನಾಥ ಪ್ರಜ್ಞೆ ಕಾಡುತ್ತಿದೆ.

ಕಳೆದ ಮೂವತ್ತು ವರ್ಷದ ಇತಿಹಾಸದಲ್ಲಿ ಕಾಫಿನಾಡಿಗೆ ಇಂತಹ ಸ್ಥಿತಿ ಬಂದಿರೋದು ಇದೇ ಮೊದಲಂತೆ. ಮುಳ್ಳಯ್ಯನಗಿರಿ ಹಾಗೂ ದತ್ತಪೀಠದಲ್ಲಿ ಒಬ್ಬನೇ ಒಬ್ಬ, ಸಿಂಗಲ್ ಪರ್ಸನ್ ಪ್ರವಾಸಿಗ ಕೂಡ ಇಲ್ಲ. ಜಿಲ್ಲಾಡಳಿತ ಹಾಗೂ ಸರ್ಕಾರ ಏನೇ ಕಟ್ಟುನಿಟ್ಟಿನ ಆದೇಶ ಜಾರಿಗೆ ತಂದರು ಪ್ರವಾಸಿಗರನ್ನ ಹಿಡಿದಿಡಲು ಸಾಧ್ಯವಾಗುತ್ತಿರಲಿಲ್ಲ. ಕದ್ದು-ಮುಚ್ಚಿಯಾದರೂ ನೂರಾರು ಜನ ಗಿರಿಯಲ್ಲಿ ಇರುತ್ತಿದ್ದರು.

ಜಿಲ್ಲಾಡಳಿತದ ಮನವಿಗೋ, ಸರ್ಕಾರದ ಆದೇಶಕ್ಕೋ ಅಥವಾ ಕೊರೊನಾ ಹುಟ್ಟಿಸಿರೋ ಆತಂಕಕ್ಕೋ ಗೊತ್ತಿಲ್ಲ ಗಿರಿಭಾಗದ ಪ್ರವಾಸಿ ತಾಣದಲ್ಲಿ ಒಬ್ಬನೇ ಒಬ್ಬ ಪ್ರವಾಸಿಗ ಇಲ್ಲ. ಪ್ರವಾಸಿ ತಾಣಗಳ ಸ್ಥಿತಿ ಹೀಗಿರೋದು ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿದ್ದ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್, ಹೋಟೆಲ್ ಮಾಲೀಕರಿಗೆ ತುಂಬಾ ನಷ್ಟವಾಗಿದೆ.

ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಕಾಫಿನಾಡಲ್ಲೀಗ ಪ್ರವಾಸಿಗರನ್ನ ಹುಡುಕುವಂತಾಗಿದೆ. ಪ್ರವಾಸಿ ತಾಣಗಳ ಸ್ಥಿತಿ ಹೀಗಾದ್ರೆ ಧಾರ್ಮಿಕ ಕ್ಷೇತ್ರಗಳಿಗೆ ಬರುವ ಭಕ್ತರ ಸಂಖ್ಯೆಯೂ ಕೂಡ ಇಳಿಕೆಯಾಗಿದೆ.

Comments

Leave a Reply

Your email address will not be published. Required fields are marked *