ಓಂಕಾರೇಶ್ವರ ದೇವಾಲಯ ಖಾಲಿ ಖಾಲಿ – ದುಬಾರೆ ಸಾಕಾನೆ ಶಿಬಿರದಲ್ಲಿ ಪ್ರವಾಸಿಗರೇ ಇಲ್ಲ

ಮಡಿಕೇರಿ: ಕೊರೊನಾ ಎಫೆಕ್ಟ್ ಪ್ರಸಿದ್ಧ ದೇವಾಲಯಗಳಿಗೂ ತಟ್ಟಿದೆ. ಮಂಜಿನ ನಗರಿ ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ಭಕ್ತರೇ ಇಲ್ಲದೆ ಸಂಪೂರ್ಣ ಖಾಲಿ ಖಾಲಿಯಾಗಿದೆ.

ಸಾಮಾನ್ಯವಾಗಿ ಓಂಕಾರೇಶ್ವರ ದೇವಾಲಯದಲ್ಲಿ ನೂರಾರು ಭಕ್ತರ ಸಂಖ್ಯೆಗಿಂತ ಹೆಚ್ಚಾಗಿರುತ್ತಿತ್ತು. ಆದರೆ ರಾಜ್ಯ ಸರ್ಕಾರ ಹೆಚ್ಚು ಜನರು ಒಂದೆಡೆ ಸೇರುವುದನ್ನು ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ತೀರಾ ಕಡಿಮೆಯಾಗಿದೆ. ಹೀಗಾಗಿ ದೇವಾಲಯ ಭಕ್ತರಿಲ್ಲದೆ ಬಿಕೋ ಎನ್ನುತ್ತಿದೆ.

ಹಲವು ವರ್ಷಗಳಿಂದ ದೇವಾಲಯಕ್ಕೆ ಬರುತ್ತಿರುವ ಭಕ್ತರೊಬ್ಬರು, ನಾನು ನಿತ್ಯ ನೋಡಿದ ಹಾಗೆ ಇಷ್ಟೊಂದು ಕಡಿಮೆ ಭಕ್ತರು ಇರೋದನ್ನ ಯಾವಾಗಲೂ ನೋಡಿಲ್ಲ. ಎರಡು ವರ್ಷಗಳಿಂದ ಪ್ರಕೃತಿಕ ವಿಕೋಪದಿಂದ ನಲುಗಿ ಹೋಗಿರುವ ಕೊಡಗಿಗೆ ಇದೀಗ ಕೊರೊನಾ ವೈರಸ್ ಎಫೆಕ್ಟ್ ತಟ್ಟಿದೆ. ಇದರಿಂದ ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದರು.

ಪ್ರವಾಸಿಗರ ಸಂಖ್ಯೆ ವಿರಳ:
ಕೊರೊನಾ ವೈರಸ್ ಹರಡುವಿಕೆ ಹೆಚ್ಚಾಗುತ್ತಿದ್ದಂತೆ, ಸರ್ಕಾರ ಉದ್ಯಾನವನ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಜನರು ಸೇರಿದಂತೆ ಸೂಚಿಸಿದ ಹಿನ್ನೆಲೆಯಲ್ಲಿ ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣಗಳಿಗೂ ನಿಷೇಧ ಹೇರಲಾಗಿದೆ. ಹೀಗಾಗಿ ವಿಶ್ವ ಪ್ರಸಿದ್ಧ ಪ್ರವಾಸಿತಾಣವಾದ ದುಬಾರೆ ಸಾಕಾನೆ ಶಿಬಿರ ಮತ್ತು ಕಾವೇರಿ ನಿಸರ್ಗಧಾಮ ಸೇರಿದಂತೆ ಹಲವು ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಬಣಗುಡುತ್ತಿವೆ.

ಸಾಕಾನೆ ಶಿಬಿರಕ್ಕೆ ನಿತ್ಯ ಸಾವಿರಾರು ಪ್ರವಾಸಿಗರು ಬಂದು ನೋಡಿ ಎಂಜಾಯ್ ಮಾಡುತ್ತಿದ್ದರು. ಕಾವೇರಿ ನಿಸರ್ಗಧಾಮವನ್ನು ಬಂದ್ ಮಾಡಲಾಗಿದೆ. ಅಲ್ಲದೇ ಮಡಿಕೇರಿ ನಗರದಲ್ಲಿರುವ ಪ್ರವಾಸಿಗರ ಹಾಟ್ ಸ್ಪಾಟ್ ರಾಜಾಸೀಟ್‍ನಲ್ಲಿ ಮಾತ್ರ ಬೆರಳೆಣಿಕೆಯಷ್ಟು ಮಂದಿ ಪ್ರವಾಸಿಗರು ಓಡಾಡುತ್ತಿದ್ದಾರೆ. ಅದರೆ ಮಡಿಕೇರಿ ನಗರದಲ್ಲಿ ಜನರ ಸಂಖ್ಯೆಯೂ ವಿರಳವಾಗಿದೆ.

Comments

Leave a Reply

Your email address will not be published. Required fields are marked *