ಕೊರೊನಾ ಎಫೆಕ್ಟ್- ಶಿವಮೊಗ್ಗ ನ್ಯಾಯಾಲಯದಲ್ಲಿ ತಪಾಸಣೆ, ಕಾಂಗ್ರೆಸ್‍ನಿಂದ ಪೂಜೆ, ಪ್ರಾರ್ಥನೆ

ಶಿವಮೊಗ್ಗ: ಮಹಾಮಾರಿ ಕೊರೊನಾ ಎಲ್ಲೆಡೆ ವ್ಯಾಪಿಸುತ್ತಿದ್ದು, ಜನತೆ ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆ ಶಿವಮೊಗ್ಗದಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೊರೊನಾ ವೈರಸ್ ನಾಶವಾಗಲಿ ಎಂದು ಮಂದಿರ, ಮಸೀದಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ನಗರದ ಕೋಟೆ ಮಾರಿಕಾಂಬ ದೇವಿಗೆ ಪೂಜೆ ಸಲ್ಲಿಸಿ, ನಂತರ ಕಾರ್ಯಕರ್ತರು 101 ಈಡುಗಾಯಿ ಒಡೆದರು. ಕೊರೊನಾ ಹರಡದಂತೆ ಮಾರಿಕಾಂಬೆ ದೇವಿಯಲ್ಲಿ ಪ್ರಾರ್ಥಿಸಿದರು. ಅಲ್ಲದೆ ಬಾಲರಾಜ್ ಅರಸು ರಸ್ತೆಯಲ್ಲಿನ ಹಜ್ರತ್ ಅಲಿ ಮಸೀದಿಯಲ್ಲಿ ಕಾರ್ಯಕರ್ತರು ಪ್ರಾರ್ಥನೆ ಸಲ್ಲಿಸಿದರು.

ಕೊರೊನಾ ವೈರಸ್ ಭೀತಿ ಹಿನ್ನೆಲೆ ನ್ಯಾಯಾಲಯದಲ್ಲಿಯೂ ತಪಾಸಣೆ ನಡೆಸಲಾಗುತ್ತಿದ್ದು, ಶಿವಮೊಗ್ಗದ ಜಿಲ್ಲಾ ನ್ಯಾಯಾಲಯದ ಸಿಬ್ಬಂದಿ, ವಕೀಲರು ಹಾಗೂ ಕಕ್ಷಿದಾರರನ್ನು ಕೊರೊನಾ ಪರೀಕ್ಷೆಗೆ ಒಳಪಡಿಲಾಗುತ್ತಿದೆ.

ವೈದ್ಯರು ನ್ಯಾಯಾಲಯದ ಆವರಣದಲ್ಲಿಯೇ ಪ್ರತಿಯೊಬ್ಬರಿಗೂ ತಪಾಸಣೆ ನಡೆಸುತ್ತಿದ್ದಾರೆ. ನೂರಾರು ಮಂದಿ ಸರತಿ ಸಾಲಿನಲ್ಲಿ ನಿಂತು ತಪಾಸಣೆ ನಂತರವೇ ನ್ಯಾಯಾಲಯಕ್ಕೆ ಪ್ರವೇಶಿಸುತ್ತಿದ್ದಾರೆ. ನ್ಯಾಯಾಲಯದ ಕಾರ್ಯ ಕಲಾಪಕ್ಕೆ ತಡವಾಗುತ್ತಿದ್ದರಿಂದ ವಕೀಲರು ಹಾಗೂ ಕಕ್ಷಿದಾರರು ಕೋರ್ಟ್ ಪ್ರವೇಶಿಸಲು ಹರಸಾಹಸಪಟ್ಟರು.

Comments

Leave a Reply

Your email address will not be published. Required fields are marked *