ವರದಿ ನೆಗೆಟಿವ್ – ಜಮಾತ್‍ಗೆ ಹೋಗಿ ಬಂದಿದ್ದ 3 ಮಂದಿ ಡಿಸ್ಚಾರ್ಜ್

ಬೀದರ್: ಕಳೆದ 23 ದಿನಗಳಿಂದ ಬೀದರ್ ಜಿಲ್ಲೆಯ ಹುಮನಾಬಾದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿದ 3 ಜನ ಕೊರೊನಾ ಶಂಕಿತರ ವರದಿ ನೆಗೆಟಿವ್ ಬಂದ ಹಿನ್ನೆಲೆ ಇಂದು ಮಧ್ಯಾಹ್ನ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.

ದೆಹಲಿ ತಬ್ಲಿಘಿ ಜಮಾತ್‍ಗೆ ಹೋಗಿ ಬಂದಿದ್ದ ದುಬಲಗುಂಡಿ ಗ್ರಾಮದ ಇಬ್ಬರು ಹಾಗೂ ಹಳ್ಳಿಖೇಡ ಬಿ ಪಟ್ಟಣದ ಒಬ್ಬರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ, ಅಂಬುಲೆನ್ಸ್ ಮೂಲಕ ಅವರ ಊರುಗಳಿಗೆ ಕಳುಹಿಸಲಾಯಿತು. ಈ ಸಂದರ್ಭದಲ್ಲಿ ಸಿಬ್ಬಂದಿಗಳು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಆಸ್ಪತ್ರೆಯ ಮೇಲ್ವಿಚಾರಕ ಡಾ. ನಾಗನಾಥ್ ಹುಲಸೂರೆ ಮಾತನಾಡಿ, ಈ ಮೂರು ಮಂದಿಗೆ ಮುಂದಿನ 14 ದಿನಗಳ ಕಾಲ ಮನೆಯಲ್ಲಿ ಪ್ರತ್ಯೇಕವಾಗಿ ಉಳಿಯಬೇಕು. ಯಾವುದೇ ಸಮಸ್ಯೆ ಉಂಟಾದಲ್ಲಿ ಕೂಡಲೇ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಬೇಕು. 14 ದಿನಗಳ ಕಾಲ ಯಾವುದೇ ಕಡೆ ಸಂಚಾರ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಮೈಲಾರೆ, ಪಿ.ಎಸ್.ಐ ರವಿಕುಮಾರ್, ಡಾ. ಬಸವಂತ ಗುಮ್ಮೆ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಡಾ. ಚೈತ್ರೇಶ್, ಡಾ. ರೋಹಿತ್ ರಗೋಜಿ, ಡಾ. ಇಂದ್ರಜೀತ್ ಚಂದಾ, ಡಾ. ದಿಲೀಪ್ ಡೊಂಗರೆ, ಡಾ. ನುಫೇಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *