ಬೆಳಗಾವಿಯಲ್ಲಿ ‘ತಬ್ಲಿಘಿ’ಗಳಿಂದ 36ಕ್ಕೇರಿದ ಕೊರೊನಾ

– ಸಾಮೂಹಿಕ ಕ್ವಾರಂಟೈನ್ ಮುಳುವಾಯ್ತಾ?

ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದು, ಸೋಂಕಿತರ ಸಂಖ್ಯೆ 36ಕ್ಕೆ ಏರಿದೆ. ಒಂದೇ ದಿನ 17 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಬೆಳಗಾವಿ ಜನರ ಆತಂಕ ದುಪ್ಪಟ್ಟಾಗಿದೆ. ಅದರಲ್ಲೂ ಎಲ್ಲಾ 36 ಮಂದಿ ಕೊರೊನಾ ಸೋಂಕು ದೆಹಲಿಯ ಜಮಾತ್ ಕಾರ್ಯಕ್ರಮದಿಂದ ಹರಡಿದ್ದು, ತಬ್ಲಿಘಿಗಳಿಂದಲೇ ಬೆಳಗಾವಿಯಲ್ಲಿ ಕೊರೊನಾ ಅಪಾಯದ ಮಟ್ಟ ತಲುಪಿದೆ.

ನಗರಗಳಿಂದ ಹಳ್ಳಿಗಳಿಗೂ ಡೆಡ್ಲಿ ಕೊರೊನಾ ಎಂಟ್ರಿ ಕೊಡುತ್ತಿರೋದು ಜಿಲ್ಲೆಯ ಜನರ ನಿದ್ದೆಗೆಡೆಸಿದೆ. ಗುರುವಾರ 17 ಪ್ರಕರಣಗಳಲ್ಲಿ ಎರಡು ಕೇಸ್‍ಗಳು ಗ್ರಾಮೀಣ ಭಾಗದಲ್ಲಿ ಪತ್ತೆಯಾಗಿದೆ. ಈಗಾಗಲೇ ಸಂಕೇಶ್ವರ ಪಟ್ಟಣ ಹಾಗೂ ಯಳ್ಳೂರ ಗ್ರಾಮವನ್ನು ಕ್ವಾರಂಟೈನ್ ಝೋನ್ ಆಗಿ ಘೋಷಿಸಲಾಗಿದೆ.

ಸಾಮೂಹಿಕ ಕ್ವಾರಂಟೈನ್ ಮುಳುವಾಯ್ತಾ?
ದೆಹಲಿಯ ನಿಜಾಮುದ್ದಿನ್‍ನಿಂದ ಮರಳಿದವರ ಜೊತೆಗೆ ಸಾಮೂಹಿಕ ಕ್ವಾರಂಟೈನ್ ಮಾಡಿದ್ದೇ ಬೆಳಗಾವಿಯಲ್ಲಿ ಸೋಂಕು ಹರಡಲು ಕಾರಣವಾಗಿದೆ. ಒಬ್ಬ ತಬ್ಲಿಘಿಯಿಂದ ಕ್ವಾರಂಟೈನ್‍ನಲ್ಲಿ 15 ಮಂದಿಗೆ ಸೋಂಕು ಹರಡಿರುವುದು ದೃಢಪಟ್ಟಿದೆ. ರಾಯಬಾಗದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿಯೂ ಸಾಮೂಹಿಕ ಕ್ವಾರಂಟೈನ್ ಮಾಡಲಾಗಿತ್ತು. ಇಲ್ಲೂ ಇಬ್ಬರು ತಬ್ಲಿಘಿಗಳಿಂದ ಕ್ವಾರಂಟೈನ್‍ನಲ್ಲಿದ್ದ 15 ಮಂದಿಗೆ ಕೊರೊನಾ ವೈರಸ್ ಹರಡಿದೆ. ಹಿರೇಬಾಗೇವಾಡಿಯಲ್ಲೂ 35 ಜನರನ್ನು ಲಾಡ್ಜ್‍ವೊಂದರಲ್ಲಿ ಸಾಮೂಹಿಕ ಕ್ವಾರಂಟೈನ್ ಮಾಡಲಾಗಿದೆ.

ಸಾಮೂಹಿಕ ಕ್ವಾರಂಟೈನ್‍ಗಳೇ ಕೊರೊನಾ ಹರಡುವಿಕೆಯ ಹಾಟ್‍ಸ್ಪಾಟ್ ಆಗಿ ಬದಲಾಗಿವೆ. ಅಧಿಕಾರಿಗಳು ನಿರ್ಲಕ್ಷ್ಯವೋ, ತಪ್ಪು ನಿರ್ಧಾರವೋ ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುವಂತೆ ಮಾಡಿದೆ. ಜಿಲ್ಲೆಯ 243 ಮಂದಿ ಕೊರೊನಾ ರಿಪೋರ್ಟ್ ಗಾಗಿ ಜಿಲ್ಲಾಡಳಿತ ಕಾಯುತ್ತಿದೆ. ರಿಪೋರ್ಟ್ ಬಂದ ಬಳಿಕ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ.

Comments

Leave a Reply

Your email address will not be published. Required fields are marked *