ಮಾಸ್ಕ್ ಇಲ್ಲದೆ ಓಡಾಡಿದ್ರೆ 50 ಬಸ್ಕಿ ಹೊಡೆಯುವ ಶಿಕ್ಷೆ

– ನಗರಕ್ಕೆ ಆಗಮಿಸುವ ವಾಹನಗಳಿಗೂ ಬ್ರೇಕ್
– ಹಾಸನ ಪೊಲೀಸರಿಂದ ಕಟ್ಟುನಿಟ್ಟಿನ ಕ್ರಮ

ಹಾಸನ: ಹಾಸನದಲ್ಲಿ ಈ ವರೆಗೆ ಯಾವುದೇ ಪ್ರಕರಣ ಪತ್ತೆಯಾಗದ ಹಿನ್ನೆಲೆಯಲ್ಲಿ ಗ್ರೀನ್ ಝೋನ್‍ಗೆ ಒಳಪಟ್ಟಿದೆ. ಹೀಗಾಗಿ ಲಾಕ್‍ಡೌನ್ ನಿಯಮಗಳನ್ನು ಕೊಂಚ ಸಡಿಲಿಕೆ ಮಾಡಿದ್ದು, ಜನ ಮಾಸ್ಕ್ ಇಲ್ಲದೆ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ.

ಗ್ರೀನ್‍ಝೋನ್‍ನಲ್ಲಿ ನಿಯಮ ಸಡಿಲಿಕೆ ಮಾಡಿದ ಬೆನ್ನಲ್ಲೇ ಜನ ಬೇಕಾಬಿಟ್ಟಿಯಾಗಿ ಬೀದಿಗಿಳಿಯುತ್ತಿದ್ದು, ಕೆಲವರು ಏನೂ ಕೆಲಸವಿಲ್ಲದಿದ್ದರೂ ರಸ್ತೆಗಿಳಿಯುತ್ತಿದ್ದಾರೆ. ಅಲ್ಲದೆ ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದಾರೆ. ಇದನ್ನು ಮನಗಂಡ ಪೊಲೀಸರು ಶಿಕ್ಷೆ ನೀಡಲು ಮುಂದಾಗಿದ್ದು, ಅನಗತ್ಯವಾಗಿ ಓಡಾಡುವವರಿಗೆ ಹಾಗೂ ಮಾಸ್ಕ್ ಇಲ್ಲದೆ ರಸ್ತೆಗಿಳಿಯುವವರಿಗೆ 50 ಬಸ್ಕಿ ಹೊಡೆಸುತ್ತಿದ್ದಾರೆ. ಈ ಮೂಲಕ ಮಾಸ್ಕ್ ಇಲ್ಲದೆ ಬೀದಿಗಿಳಿದ ಜನಕ್ಕೆ ಹಾಸನ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ.

ಕಾರ್, ಆಟೋಗಳಲ್ಲಿ ಅನವಶ್ಯಕವಾಗಿ ಹೆಚ್ಚು ಜನರನ್ನು ತುಂಬಿಕೊಂಡು ಸಂಚರಿಸುತ್ತಿದ್ದು, ಅಂತಹವರನ್ನು ಹಿಡಿದು ಬಸ್ಕಿ ಹೊಡೆಸುತ್ತಿದ್ದಾರೆ. ಅಲ್ಲದೆ ವಾಹನದಲ್ಲಿ ಓಡಾಡುವುದು ಮತ್ತೆ ಮರುಕಳಿಸಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಹಾಸನ ಗ್ರೀನ್ ಝೋನ್‍ನಲ್ಲಿರುವ ಕಾರಣ ಅನವಶ್ಯಕವಾಗಿ ನಗರಕ್ಕೆ ಬರುತ್ತಿರುವವರನ್ನು ನಗರದ ಹೊರಭಾಗದಲ್ಲೇ ತಡೆದು ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ. ಹಾಸನ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಕಾವಲು ಕಾಯುತ್ತಿದ್ದು, ಎಲ್ಲ ವಾಹನಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸೂಕ್ತ ಕಾರಣ ನೀಡದವರನ್ನು ನಗರದ ಒಳಗೆ ಬಿಡದೆ ವಾಪಸ್ ಕಳುಹಿಸುತ್ತಿದ್ದಾರೆ. ಈ ಮೂಲಕ ಅನಾವಶ್ಯಕವಾಗಿ ಸುತ್ತಾಡಲು ಬರುತ್ತಿದ್ದವರು ಇದೀಗ ವಾಪಸ್ ಹೋಗುವಂತಾಗಿದೆ.

Comments

Leave a Reply

Your email address will not be published. Required fields are marked *