57,633 ವಾಹನ ಸೀಜ್, 2181 ಮಂದಿ ಮೇಲೆ ಎಫ್‍ಐಆರ್ – ಇಂದಿನಿಂದ ಮತ್ತಷ್ಟು ಬಿಗಿ ಕ್ರಮ

ಬೆಂಗಳೂರು: ಇಂದಿನಿಂದ ಮತ್ತಷ್ಟು ಬಿಗಿಯಾದ ಕ್ರಮ ಕೈಗೊಳ್ಳುತ್ತೇವೆ. ಈ ಕ್ರಮಕ್ಕೆ ಜನರು ಸಹಕಾರ ನೀಡಬೇಕು ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ 3ರ ತನಕ ಲಾಕ್‍ಡೌನ್ ವಿಸ್ತರಣೆಯ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನ ನಾವು ಪಾಲಿಸುತ್ತೇವೆ ಎಂದು ತಿಳಿಸಿದರು.

ಏಪ್ರಿಲ್ 20ರ ತನಕ ಹಾಟ್ ಸ್ಪಾಟ್ ಗಳಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕೇಂದ್ರ ಮಾರ್ಗಸೂಚಿ ಬಂದ ಬಳಿಕ ರಾಜ್ಯ ಸರ್ಕಾರ ಮತ್ತಷ್ಟು ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ. ಈ ನಿರ್ಧಾರಕ್ಕೆ ಜನ ಸಹಕರಿಸಬೇಕು ಎಂದು ಹೇಳಿದರು.

ಲಾಕ್‍ಡೌನ್ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಇಲ್ಲಿಯವರೆಗೆ 57,633 ವಾಹನಗಳು ಸೀಜ್, 2181 ಜನರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. 85 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಇವತ್ತಿಂದ ಮತ್ತಷ್ಟು ಬಿಗಿಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೃಷಿಗೆ ಯಾವುದೇ ತೊಂದರೆ ಆಗದ ರೀತಿ ಕ್ರಮ ವಹಿಸಿದ್ದು, ಅಗತ್ಯ ವಸ್ತುಗಳ ಪೂರೈಕೆಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಿಕೊಂಡಿದ್ದೇವೆ. ಮದ್ಯದಂಗಡಿ, ಸರ್ಕಾರಿ ಕಚೇರಿ ಒಪನ್ ಬಗ್ಗೆ ಮಾರ್ಗಸೂಚಿ ಬಂದ ಮೇಲೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *