ಸೆನ್ಸಾರ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಯಂತ್ರ- ಕೆಎಲ್‍ಇ ವಿದ್ಯಾರ್ಥಿಗಳ ಸಂಶೋಧನೆ

ಹುಬ್ಬಳ್ಳಿ: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸುವುದು ಸವಾಲಾಗಿ ಪರಿಣಮಿಸಿದ್ದು, ಸ್ಪರ್ಶದಿಂದಲೇ ಹರಡುವ ರೋಗವನ್ನು ತಡೆಯಲು ವಿವಿಧ ರೀತಿಯ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಅದೇ ರೀತಿ ಇದೀಗ ಹುಬ್ಬಳ್ಳಿಯ ಕೆಎಲ್‍ಇ ಕಾಲೇಜಿನ ವಿದ್ಯಾರ್ಥಿಗಳು ಸೆನ್ಸಾರ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಯಂತ್ರವನ್ನು ಸಂಶೋಧಿಸಿದ್ದಾರೆ.

ಕೊರೊನಾದಿಂದ ರಕ್ಷಿಸಿಕೊಳ್ಳಲು ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅಗತ್ಯವಾಗಿದ್ದು, ಆದರೂ ಕೆಲವೊಮ್ಮೆ ನಮಗೆ ಅರಿವಿಲ್ಲದೆಯೇ ವೈರಸ್ ಹರಡುವ ಸಾಧ್ಯತೆ ಇರುತ್ತದೆ. ಕೊರೊನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ಹೆಚ್ಚಿನ ಜಾಗರೂಕತೆ ವಹಿಸಬೇಕಾಗುತ್ತದೆ. ಇದನ್ನು ಮನಗಂಡ ಕೆಎಲ್‍ಇ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ಸೆನ್ಸಾರ್ ಮೂಲಕ ಕಾರ್ಯನಿರ್ವಹಿಸುವ ಸ್ವಯಂಚಾಲಿತ ಹ್ಯಾಂಡ್ ಸೆನಿಟೈಸರ್ ಯಂತ್ರವನ್ನು ತಯಾರಿಸಿದ್ದಾರೆ.

ಪ್ರಸ್ತುತ ಹ್ಯಾಂಡ್ ಸ್ಯಾನಿಟೈಸರ್ ಬಳಸಲು ಕೈಯಿಂದ ಅವುಗಳನ್ನು ಮಟ್ಟಬೇಕು. ಕೋವಿಡ್-19 ಆಸ್ಪತ್ರೆಗಳಲ್ಲಿ ಪಿಪಿಇ ಧರಿಸಿರುವ ವೈದ್ಯರು ಹಾಗೂ ನರ್ಸ್ ಗಳಿಗೆ ಈ ರೀತಿಯ ಸ್ಯಾನಿಟೈಸರ್ ಬಳಸುವುದು ಕಷ್ಟವಾಗುತ್ತದೆ. ಈ ಯಂತ್ರದ ಮೂಲಕ ಕೈಗಳನ್ನು ಸುಲಭವಾಗಿ ಸ್ಯಾನಿಟೈಸ್ ಮಾಡಿಕೊಳ್ಳಬಹುದಾಗಿದೆ. ಸ್ಯಾನಿಟೈಸರ್ ರೀಫಿಲ್ ಮಾಡುವ ವ್ಯವಸ್ಥೆ ಅಳವಡಿಸಲಾಗಿದ್ದು, ಖಾಲಿಯಾದ ನಂತರ ಮತ್ತೆ ತುಂಬಬೇಕಾಗುತ್ತದೆ.

ಕಾರ್ತಿಕ್.ವಿ.ಆರ್. ಅಭಿಲಾಷ್.ಜಿ, ವಿನಾಯಕ, ಪ್ರವೀಣ, ಸಂತೋಷ್, ಅಭಿಲಾಷ್.ಕೆ ವಿದ್ಯಾರ್ಥಿಗಳ ತಂಡ ಸೆನ್ಸಾರ್ ಆಧರಿಸಿ ಕಾರ್ಯನಿರ್ವಹಿಸುವ ಸ್ವಯಂಚಾಲಿತ ಹ್ಯಾಂಡ್ ಸ್ಯಾನಿಟೈಸರ್ ಯಂತ್ರ ತಯಾರಿಸಿದ್ದಾರೆ. ವಿದ್ಯಾರ್ಥಿಗಳಿಗೆ ಕೆಎಲ್‍ಇ ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ರವಿ ಗುಟ್ಟಾಲ್ ಹಾಗೂ ಕಿಮ್ಸ್ ವೈದ್ಯ ಎಸ್.ವಿ.ಮುಲ್ಕಿಮಠ ಮಾರ್ಗದರ್ಶನ ನೀಡಿದ್ದಾರೆ.

ಈ ಪ್ರಯತ್ನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಜಗದೀಶ್ ಶೆಟ್ಟರ್ ಹಾಗೂ ಜಿಲ್ಲಾಧಿಕಾರಿ ದೀಪಾ ಚೋಳನ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ವಿದ್ಯಾರ್ಥಿಗಳು ಈ ಸ್ವಯಂಚಾಲಿತ ಹ್ಯಾಂಡ್ ಸ್ಯಾನಿಟೈಸರ್ ಯಂತ್ರವನ್ನು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿಯವರಿಗೆ ಹಸ್ತಾಂತರಿಸಿದರು. ಆಸ್ಪತ್ರೆ, ಬೃಹತ್ ಕೈಗಾರಿಕೆಗಳು, ಸರ್ಕಾರಿ ಕಚೇರಿ, ಹೋಟೆಲ್, ಲಾಡ್ಜ್, ಸಮುದಾಯ ಭವನ ಇತರೆಡೆಗಳಲ್ಲೂ ಸ್ವಯಂಚಾಲಿತ ಹ್ಯಾಂಡ್ ಸೆನಟೈಜರ್ ಬಳಕೆಗೆ ಯೋಗ್ಯವಾಗಿದೆ.

Comments

Leave a Reply

Your email address will not be published. Required fields are marked *