ಪ್ರವಾಸಿಗರನ್ನೇ ನಂಬಿ ಬದುಕ್ತಿರೋ ಕೋತಿಗಳಿಗೂ ತಟ್ಟಿತು ಕೊರೊನಾ ಎಫೆಕ್ಟ್

ಕೋಲಾರ: ಕಾಶಿ ವಿಶ್ವನಾಥಸ್ವಾಮಿಯ ಪುಣ್ಯ ಕ್ಷೇತ್ರದಲ್ಲೂ ಕೊರೊನಾ ಮಾಹಾಮಾರಿಯ ಕರಿ ನೆರಳು ಬಿದ್ದಿದೆ. ದೇವರನ್ನೇ ನಂಬಿ ಬದುಕುತ್ತಿದ್ದ ವಾನರ ಸೈನ್ಯಕ್ಕೆ ಕೊರೊನಾದಿಂದಾಗಿ ಹಸಿವು ಅನ್ನೋ ಕಾಯಿಲೆ ತಂದಿಟ್ಟು ಹಿಂಸಿಸುತ್ತಿದೆ. ನಿಶ್ಯಕ್ತಿಯಿಂದ ಎದ್ದು ನಿಲ್ಲಲು ಸಹ ಸಾಧ್ಯವಾಗದೇ ನರಳುತ್ತಿರುವ ವಾನರ ಸೈನ್ಯ ಒಂದೆಡೆ. ಇನ್ನೊಂದೆಡೆ ಹಸಿವು, ಬಾಯಾರಿಕೆಗಳಿಂದ ಬಳಲುತ್ತಿರುವ ಮಂಗಗಳನ್ನು ನೋಡಿದ್ರೆ ನಿಜಕ್ಕೂ ಎಂಥವರ ಕರುಳು ಚುರುಕ್ ಅನ್ನದೇ ಇರದು.

ಕೊರೊನಾ ಮಹಾಮಾರಿ ಜನರ ಜೀವನ ದುಸ್ಥರ ಮಾಡಿದ್ದಲ್ಲದೇ, ಅದೆಷ್ಟೋ ಮೂಕ ಪ್ರಾಣಿಗಳ ಜೀವನವನ್ನು ಬರ್ಬರಗೊಳಿಸಿದೆ. ಕೋಲಾರದ ಪ್ರಸಿದ್ಧ ಕ್ಷೇತ್ರ ಅಂತರಗಂಗೆಯಲ್ಲಿ ಪ್ರವಾಸಿಗರನ್ನೇ ನಂಬಿ ಸಾವಿರಾರು ಸಂಖ್ಯೆಯ ಕೋತಿಗಳು ಬದುಕುತ್ತಿವೆ. ಆದರೆ ಲಾಕ್‍ಡೌನ್ ಹಿನ್ನೆಲೆ ಕಾಶಿವಿಶ್ವೇಶ್ವರ ಸ್ವಾಮಿ ದೇವಾಲಯಕ್ಕೆ ಬರುವವರಿಲ್ಲದೆ ಮಂಗಗಳಿಗೂ ಆಹಾರವಿಲ್ಲವಾಗಿದೆ.

ಅರಣ್ಯ ಇಲಾಖೆ, ಯುವ ಫೌಂಡೇಶನ್, ಇಲ್ಲಿನ ಸ್ಥಳೀಯ ನಿವಾಸಿಗಳು, ಸಂಸದ ಎಸ್.ಮುನಿಸ್ವಾಮಿ ಬೆಂಬಲಿಗರು ಪ್ರತಿನಿತ್ಯ ಇಲ್ಲಿರುವ ಕೋತಿಗಳಿಗೆ ಬಿಸ್ಕತ್, ತರಕಾರಿ, ಹಣ್ಣುಗಳನ್ನು ವಿತರಿಸುತ್ತಿದ್ದಾರೆ. ಆದರೆ ಇಲ್ಲಿ ವಾಸಿಸುತ್ತಿರುವ ಮಂಗಗಳ ಸಂಖ್ಯೆಗೆ ಇದು ಅರೆಕಾಸಿನ ಮಜ್ಜಿಗೆಯಾಗಿದೆ. ಕೊರೊನಾ ಜೊತೆಗೆ ಬೇಸಿಗೆಯ ಬಿಸಿ ಇಲ್ಲಿನ ಕೋತಿಗಳು ಜೀವ ಉಳಿಸಿಕೊಳ್ಳೋದೆ ದುಸ್ಥರ ಎನ್ನುವ ಸ್ಥಿತಿ ತಂದೊಡ್ಡಿದೆ ಎಂದು ವನ್ಯ ಜೀವ ಪರಿಪಾಲಕ ತ್ಯಾಗರಾಜ್ ಹೇಳುತ್ತಾರೆ.

ಒಟ್ಟನಲ್ಲಿ ಮನುಷ್ಯರು ಸೋಂಕಿನಿಂದ ಪಾರಾಗಲು ಲಾಕ್‍ಡೌನ್‍ನಿಂದ ಮನೆಯಲ್ಲಿದ್ದರೆ ಮೂಕ ಪ್ರಾಣಿಗಳು ಮಾತ್ರ ಹಸಿವಿನಿಂದ ಬಳಲುತ್ತಿವೆ.

Comments

Leave a Reply

Your email address will not be published. Required fields are marked *