ಉತ್ತಮ ಆಹಾರ, ಊಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲದೆ ಕೊರೊನಾ ವಾರಿಯರ್ಸ್ ಆಕ್ರೋಶ

ಶಿವಮೊಗ್ಗ: ಕೊರೊನಾ ಕಾಣಿಸಿಕೊಂಡ ದಿನದಿಂದಲೂ ಹಗಲು ರಾತ್ರಿ ಎನ್ನದೇ, ಮನೆಗೂ ಹೋಗದೆ ನರ್ಸ್ ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅವರಿಗೆ ಊಟ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸದೆ ಗೋಳಾಡುವಂತೆ ಮಾಡಲಾಗಿದೆ.

ಶಿವಮೊಗ್ಗದ ಮೆಗ್ಗಾನ್ ಭೋಧನಾ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಇಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಮನೆಗೆ ಹೋಗುವಂತಿಲ್ಲ. ಕೊರೊನಾ ವಾರಿಯರ್ ಗಳು ಉಳಿದುಕೊಳ್ಳಲು ಜಿಲ್ಲಾಡಳಿತ ನಗರದ ವಿವಿಧ ಹೋಟೆಲ್ ಗಳಲ್ಲಿ ವ್ಯವಸ್ಥೆ ಮಾಡಿದೆ. ಆದರೆ ಹೋಟೆಲ್ ನಲ್ಲಿ ಕೊಠಡಿಗಳು ಸರಿಯಿಲ್ಲ, ಅಲ್ಲಿ ಯಾವುದೇ ಸರಿಯಾದ ವ್ಯವಸ್ಥೆ ಇಲ್ಲ. ಜೊತೆಗೆ ಉತ್ತಮ ಗುಣಮಟ್ಟದ ಊಟವನ್ನು ಹೋಟೆಲ್ ನವರು ನೀಡುತ್ತಿಲ್ಲ ಎಂದು ನರ್ಸ್ ಗಳು ಆರೋಪಿಸಿದ್ದಾರೆ. ಅಲ್ಲದೆ ಉತ್ತಮ ಹೋಟೆಲ್ ನಲ್ಲಿ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

ಹೋಟೆಲ್‍ನಲ್ಲಿ ಊಟ, ತಿಂಡಿ ಸರಿ ಇಲ್ಲ. ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಆರೋಪಿಸಿ ನರ್ಸ್ ಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನರ್ಸ್ ಗಳು ಹೋಟೆಲ್ ಬಳಿ ಅಸಮಾಧಾನಗೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಠಾರೆ, ಕೊರೊನಾ ವಾರಿಯರ್ ಗಳಿಗೆ ಉತ್ತಮವಾದ ಹೋಟೆಲ್ ನಲ್ಲಿಯೇ ವ್ಯವಸ್ಥೆ ಮಾಡಿದ್ದೇವೆ. ಯಾವುದೇ ಸಮಸ್ಯೆಯಿಲ್ಲ. ಆದರೂ ನರ್ಸ್ ಗಳು ಉಳಿದುಕೊಂಡಿರುವ ಹೋಟೆಲ್ ಬೇಡ ಬದಲಾಯಿಸಿಕೊಡಿ ಅಂದರೆ ಬದಲಾಯಿಸುತ್ತೇವೆ ಎಂದು ಸಮಜಾಯಿಷಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *