ನಿರ್ಮಾಪಕ ಉಮಾಪತಿ ಗೌಡಗೆ ಬೆದರಿಕೆ ಹಾಕಿದ್ದ ಭೂಗತ ಪಾತಕಿ ಬಾಂಬೆ ರವಿ ಕೊರೊನಾದಿಂದ ಸಾವು

ಬೆಂಗಳೂರು: ರಾಬರ್ಟ್ ನಿರ್ಮಾಪಕ ಉಮಾಪತಿ ಗೌಡ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಭೂಗತ ಪಾತಕಿ ಬಾಂಬೆ ರವಿ ಕೋವಿಡ್ ನಿಂದ ಮೃತಪಟ್ಟಿದ್ದಾನೆ.

ದೂರದ ದಕ್ಷಿಣ ಆಫ್ರಿಕಾದಲ್ಲಿ ದಲ್ಲಿ ಕೊರೊನಾಗೆ ಬಲಿಯಾಗಿದ್ದಾನೆ ಎನ್ನಲಾಗಿದೆ. ಹಲವು ವರ್ಷಗಳಿಂದ ಬೆಂಗಳೂರು ಪೊಲೀಸರಿಗೆ ತಲೆನೋವಾಗಿದ್ದ ರವಿ, ಕಳೆದ ವರ್ಷ ರಾಬರ್ಟ್ ನಿರ್ಮಾಪಕ ಉಮಾಪತಿ ಮತ್ತು ದೀಪಕ್ ಗೆ ಸಹ ಧಮ್ಕಿ ಹಾಕಿದ್ದ. ರವಿ ಹಣಕ್ಕೆ ಧಮ್ಕಿ ಹಾಕಿ ಕೊಲೆ ಸುಪಾರಿ ನೀಡಿದ್ದ.

ಈ ಸಂಬಂಧ ಜಯನಗರ ಪೊಲೀಸರು ಸುಪಾರಿ ಹುಡುಗರನ್ನು ರೆಂಡ್ ಹ್ಯಾಂಡ್ ಆಗಿ ಬಂಧಿಸಿದ್ದರು. ಬಾಂಬೆ ರವಿ ಬಂಧನಕ್ಕೂ ಪೊಲೀಸರು ವಿದೇಶಕ್ಕೆ ಹೋಗಿ ಹುಡುಕಾಡಿದ್ದರು. ಎರಡು ದಿನಗಳ ಹಿಂದೆ ದಕ್ಷಿಣ ಆಫ್ರಿಕಾದ ಖಾಸಗಿ ಆಸ್ಪತ್ರೆಯಲ್ಲಿ ರವಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ರಾಜೀನಾಮೆ ಕೊಟ್ಟ ಬಳಿಕ ಬಿಎಸ್‍ವೈ ಸೈಲೆಂಟ್ ಪ್ಲ್ಯಾನ್

ಉಮಾಪತಿ ಬಳಿ ಕ್ಷಮೆ

ಆಸ್ಪತ್ರೆ ಸೇರಿದ ಬಳಿಕ ನಿರ್ಮಾಪಕ ಉಮಾಪತಿ ಬಳಿ ಕ್ಷಮೆ ಕೇಳಿದ್ದ ಎನ್ನಲಾಗಿದೆ. ರಾಬರ್ಟ್ ನಿರ್ಮಾಪಕ ಉಮಾಪತಿ ಮತ್ತು ಸೋದರ ದೀಪಕ್ ಕೊಲೆ ವಿಚಾರಕ್ಕೆ ಕ್ಷಮೆ ಕೇಳಿದ್ದು, ನನ್ನಿಂದ ತಪ್ಪಾಗಿದೆ ಬೇರೆಯವರ ಮಾತು ಕೇಳಿ ಈ ಕೆಲಸಕ್ಕೆ ಕೈ ಹಾಕಿದೆ. ಇದರಲ್ಲಿ ಕೆಲವರು ನನ್ನನ್ನು ಬಳಸಿಕೊಂಡರು ಎಂದು ಬಾಂಬೆ ರವಿ ಕ್ಷಮೆಯಾಚಿಸಿದ್ದ ಎನ್ನಲಾಗಿದೆ.

ಉಮಾಪತಿ ಜೊತೆಯಲ್ಲಿದ್ದವರೇ ಬಾಂಬೆ ರವಿಗೆ ಸುಪಾರಿ ನೀಡಿದರಾ ಎಂಬ ಗುಮಾನಿ ಕಾಡೋಕೆ ಆರಂಭಿಸಿದೆ. ಆ ದೊಡ್ಡ ವ್ಯಕ್ತಿಗಳ ಮಾತು ಕೇಳಿ ಉಮಾಪತಿಗೆ ಧಮ್ಕಿ ಹಾಕಿದ್ದನಾ ಬಾಂಬೆ ರವಿ ಅನ್ನುವ ವಿಚಾರ ಮುನ್ನೆಲೆಗೆ ಬಂದಿದೆ. ಬಾಂಬೆ ರವಿ ಸಾಯುವ ಕೆಲವು ದಿನಗಳ ಹಿಂದೆ ಅಂದರೆ ಆಗಸ್ಟ್ 5 ರಂದು ಸತ್ಯ ಬಾಯಿ ಬಿಟ್ಟಿದ್ದಾನೆ. ಉಮಾಪತಿ ಅವರಿಗೆ ಕರೆ ಮಾಡಿ ಸತ್ಯ ಹೇಳಿ, ಕ್ಷಮೆ ಕೇಳಿದ್ದಾನೆ. ಕೆಲವರು ನಮ್ಮ ಮಧ್ಯೆ ತಂದಿಡುವ ಕೆಲಸ ಮಾಡಿದ್ದಾರೆ. ಅವರ ಹೆಸರು ಬೇಡ. ಚಿಲ್ಲರೆ ಕಾಸಿನ ಆಸೆಗೆ ಏನೇನೋ ಹೇಳುತ್ತಿದ್ದಾರೆ. ನೀವು ಯಾರು ಅನ್ನೋದೆ ನನಗೆ ಗೊತ್ತಿಲ್ಲ ಎಂದು ರವಿ ಹೇಳಿದ್ದಾನೆ.

ನನ್ನಿಂದ ಗೊತ್ತಿಲ್ಲದೆ ತಪ್ಪಾಗಿದೆ ನಿಮ್ಮ ಪೋಷಕರಲ್ಲಿ ನಾನು ಕ್ಷಮೆ ಕೇಳುತ್ತೇನೆ. ಮನೆಗೆ ಹೋಗಿ ಫೋನ್ ಸ್ಪೀಕರ್ ಆನ್ ಮಾಡಿ ನಾನು ಕ್ಷಮೆ ಕೇಳುತ್ತೇನೆ ಎಂದು ಬಾಂಬೆ ರವಿ ಹೇಳಿದ್ದಾನೆ. ಬಾಂಬೆ ರವಿ ಮತ್ತು ಉಮಾಪತಿ ಸಂಭಾಷಣೆಯ ಆಡಿಯೋ ಲಭ್ಯವಾಗಿದ್ದು, ಬಾಂಬೆ ರವಿಗೆ ಉಮಾಪತಿ ಬಗ್ಗೆ ಮಾಹಿತಿ ಕೊಟ್ಟವರು ಯಾರು? ಉಮಾಪತಿ ಬಗ್ಗೆ ಗೊತ್ತಿದ್ದವರೇ ಬಾಂಬೆ ರವಿಗೆ ಮಾಹಿತಿ ಕೊಟ್ಟರಾ? ರಾಬರ್ಟ್ ಸಿನಿಮಾ ಟೈಮ್ ನಲ್ಲಿ ಉಮಾಪತಿಗೆ ಬಾಂಬೆ ರವಿಯಿಂದ ಸುಫಾರಿ ಕೊಟ್ಟರಾ? ಇಂತಹ ಹಲವು ಪ್ರಶ್ನೆಗಳು ಹಾಗೇ ಉಳಿದುಕೊಂಡಿವೆ.

Comments

Leave a Reply

Your email address will not be published. Required fields are marked *