ಕಲಬುರಗಿಗೆ ಹೋಗುವ ಬಸ್ಸುಗಳೆಲ್ಲ ಖಾಲಿ ಖಾಲಿ

ಬೀದರ್: ಮಹಾಮಾರಿ ಕೊರೊನಾ ವೈರಸ್ ದೇಶದ ಜನರನ್ನು ಬೆಚ್ಚಿ ಬೀಳಿಸುತ್ತಿದ್ದು, ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 80ರ ಗಡಿ ದಾಟಿದೆ. ಅಲ್ಲದೆ ದೇಶದಲ್ಲೇ ಮೊದಲ ಕೊರೊನಾ ಸೋಂಕಿತ ವ್ಯಕ್ತಿ ಕಲಬುರಗಿಯಲ್ಲಿ ಸಾವನ್ನಪ್ಪಿದ್ದಾನೆ. ಹೀಗಾಗಿ ಗಡಿ ಜಿಲ್ಲೆ ಬೀದರ್ ಪ್ರಯಾಣಿಕರು ಕಲಬುರಗಿ ಎಂದರೆ ಭಯ ಪಡುತ್ತಿದ್ದಾರೆ.

ಪ್ರತಿದಿನ ಹತ್ತಾರು ಬಸ್ಸುಗಳಲ್ಲಿ ನೂರಾರು ಪ್ರಯಾಣಿಕರು ಬೀದರ್ ಹಾಗೂ ಕಲಬುರಗಿ ನಡುವೆ ಸಂಚರಿಸುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆ ಕಲಬುರಗಿಯಲ್ಲಿ 76ರ ವೃದ್ಧನನ್ನು ಕೊರೊನಾ ಮೊದಲ ಬಲಿಯಾಗಿ ತೆಗೆದುಕೊಂಡಿದ್ದರಿಂದ ಕಲಬುರಗಿ ಕಡೆ ಪ್ರಯಾಣ ಮಾಡಲು ಪ್ರಯಾಣಿಕರು ಹಿಂದೇಟು ಹಾಕುತ್ತಿದ್ದಾರೆ.

ಕೇಂದ್ರ ಬಸ್ ನಿಲ್ದಾಣದಲ್ಲಿನ ಬಸ್ಸುಗಳಲ್ಲಿ ಪ್ರಯಾಣಿಕರಿಲ್ಲದೆ ಖಾಲಿ ಹೊಡೆಯುತ್ತಿದ್ದು, ಬಸ್ಸುಗಳು ಖಾಲಿಯಾಗಿ ಸಂಚಾರ ಮಾಡುತ್ತಿವೆ. ಶೇಕಡ 70ರಷ್ಟು ಪ್ರಯಾಣಿಕರ ಸಂಖ್ಯೆ ಕುಸಿದಿದ್ದು, ಪ್ರಯಾಣಿಕರಿಲ್ಲದೆ ಬಸ್ಸುಗಳು ಸರತಿಯಲ್ಲಿ ನಿಂತುಕೊಂಡಿವೆ. ಪ್ರಯಾಣಿಕರಿಲ್ಲದ್ದಕ್ಕೆ ಸಾರಿಗೆ ಸಿಬ್ಬಂದಿ ಸಹ ಕೆಲಸವಿಲ್ಲದೆ ಕುಳಿತಿದ್ದಾರೆ. ಹೀಗಾಗಿ ಕೊರೊನಾ ವೈರಸ್ ಆರ್ಭಟಕ್ಕೆ ಸಾರಿಗೆ ಇಲಾಖೆ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದೆ.

Comments

Leave a Reply

Your email address will not be published. Required fields are marked *