ಮಾಸ್ಕ್ ಇಲ್ಲದೆ ಓಡಾಟ- ಬೆಂಗಳೂರಲ್ಲಿ 51 ಸಾವಿರ ದಂಡ ಸಂಗ್ರಹ

ಬೆಂಗಳೂರು: ಮೊನ್ನೆಯಷ್ಟೇ ಬಿಬಿಎಂಪಿ ದಂಡ ಹಾಕುವ ನಿಯಮವನ್ನು ರೂಪಿಸಿದ್ದು, ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸಿದವರಿಂದ ಒಟ್ಟು 51,700 ರೂ.ದಂಡವನ್ನು ಸಂಗ್ರಹಿಸಲಾಗಿದೆ.

ಈ ಕುರಿತು ಟ್ವೀಟ್ ಮಾಡಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಮಾಹಿತಿ ನೀಡಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೇ ಓಡಾಡುತ್ತಿದ್ದವರಿಂದ 51,700 ರೂ. ದಂಡವನ್ನು ಮಾರ್ಷಲ್‍ಗಳು ಸಂಗ್ರಹಿಸಿದ್ದು, ನಿಯಮ ಉಲ್ಲಂಘಿಸಬೇಡಿ ಸುರಕ್ಷತೆಗೆ ಸಹಕರಿಸಿ ಎಂದು ಮನವಿ ಮಾಡಿದ್ದಾರೆ. ಮೊನ್ನೆಯೇ ಆದೇಶ ಹೊರಡಿಸಿದ್ದ ಬಿಬಿಎಂಪಿ ಮಾಸ್ಕ್ ಧರಿಸದವರಿಗೆ ಮೊದಲ ಬಾರಿಗೆ 1 ಸಾವಿರ ರೂ. ದಂಡ, ಎರಡನೇ ಬಾರಿ ನಿಯಮ ಉಲ್ಲಂಘಿಸಿದರೆ 2 ಸಾವಿರ ರೂ.ದಂಡ ವಿಧಿಸಲಾಗುತ್ತದೆ. ಅಲ್ಲದೆ ಶಿಕ್ಷೆಯನ್ನೂ ವಿಧಿಸಲಾಗುತ್ತಿದೆ ಎಂದು ತಿಳಿಸಿತ್ತು.

ಇದಾವುದಕ್ಕೂ ಸಾರ್ವಜನಿಕರು ಕ್ಯಾರೆ ಎನ್ನದೆ ಸಂಚರಿಸಿದ್ದು, ಹೀಗಾಗಿ ದಂಡ ವಿಧಿಸಲಾಗುತ್ತಿದೆ. 51 ಸಾವಿರ ರೂ.ಗೂ ಅಧಿಕ ದಂಡ ಸಂಗ್ರಹಿಸಲಾಗಿದೆ. ಕೊರೊನಾ ಅವಾಂತರದ ಹಿನ್ನೆಲೆ ಮಾಸ್ಕ್ ಧರಿಸುವ ಕುರಿತು, ಎಲ್ಲೆಂದರಲ್ಲಿ ಉಗುಳುವ ಕುರಿತು ಈಗಾಗಲೇ ಹಲವು ರಾಜ್ಯಗಳಲ್ಲಿ ದಂಡ ಹಾಕಲಾಗುತ್ತಿದ್ದು, ಅದೇ ರೀತಿ ಬೆಂಗಳೂರಿನಲ್ಲೂ ಬಿಬಿಎಂಪಿಯಿಂದ ದಂಡ ಹಾಕಲಾಗುತ್ತಿದೆ.

ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಬಿಬಿಎಂಪಿ ಈ ನಿರ್ಧಾರ ಕೈಗೊಂಡಿದ್ದು, ಶುಕ್ರವಾರದಿಂದಲೇ ದಂಡ ಹಾಕಲಾಗುತ್ತಿದೆ. ಸಾರ್ವಜನಿಕವಾಗಿ ಮಾಸ್ಕ್ ಹಾಕದಿದ್ದರೆ, ಸಾರ್ವಜನಿಕ ಪ್ರದೇಶದಲ್ಲಿ ಉಗುಳಿದರೆ, ಎಲ್ಲೆಂದರಲ್ಲಿ ಮೂತ್ರ ವಿರ್ಸಜನೆ ಮಾಡಿದರೆ, ಮಾಸ್ಕ್ ವಿಲೇವಾರಿ ಸರಿಯಾಗಿ ಮಾಡದಿದ್ದರೆ ದಂಡ ಬೀಳುವುದು ಖಚಿತ. ಮುಲಾಜಿಲ್ಲದೆ ದಂಡ ವಿಧಿಸಲು ಬಿಬಿಎಂಪಿ ಕ್ರಮ ಕೈಗೊಂಡಿದೆ.

Comments

Leave a Reply

Your email address will not be published. Required fields are marked *