ಕೊರೊನಾ ಎಫೆಕ್ಟ್- ಬಂಡೀಪುರ ಸಫಾರಿ, ಪಣಂಬೂರು ಬೀಚ್ ಬಂದ್

ಚಾಮರಾಜನಗರ/ಮಂಗಳೂರು: ರಾಜ್ಯದ ಪ್ರಮುಖ ಹುಲಿ ಸಂರಕ್ಷಿತಾರಣ್ಯ ಪ್ರವಾಸಿಗರಿಲ್ಲದೆ ಬಣಗುಡುತ್ತಿರುವ ದೃಶ್ಯ ಸಾಮಾನ್ಯವಾಗಿದ್ದು, ಇದೀಗ ಪ್ರವಾಸಿಗರಿಗೆ ನಿಷೇಧ ಹೇರಿ ಆದೇಶ ಹೊರಡಿಸಲಾಗಿದೆ. ಇತ್ತ ಮಂಗಳೂರಿನ ಪಣಂಬೂರು ಬೀಚ್ ಸಹ ಜನರಿಲ್ಲದೆ ಬಿಕೋ ಎನ್ನುತ್ತಿದೆ.

ಕೊರೊನಾ ಎಮರ್ಜೆನ್ಸಿ ಹಿನ್ನೆಲೆಯಲ್ಲಿ ಬಂಡೀಪುರಕ್ಕೆ ಆಗಮಿಸುವ ಪ್ರವಾಸಿಗರಿಗೆ ನಿಷೇಧ ಹೇರಿ ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ. ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಬಂಡೀಪುರದಲ್ಲಿ ಜನರಿಲ್ಲದೇ ಖಾಲಿ ಹೊಡೆಯುತ್ತಿದೆ.

ಬಂಡೀಪುರವಷ್ಟೇ ಅಲ್ಲದೆ ಕೆ.ಗುಡಿ ಸಫಾರಿ ಕೂಡ ಬಂದ್ ಮಾಡಲಾಗಿದೆ. ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಮೇಲುಕಾಮನಹಳ್ಳಿ ಬಳಿಯ ಸಫಾರಿ ಕೇಂದ್ರ ಬಂದ್ ಮಾಡಲಾಗಿದೆ. ಬಂಡೀಪುರ ವ್ಯಾಪ್ತಿಯಲ್ಲಿ ಬರುವ ರೆಸಾರ್ಟ್, ಹೋಟೆಲ್‍ಗಳು ಕೂಡ ಬಂದ್ ಆಗಿದ್ದು ದೇಶ, ವಿದೇಶದಿಂದ ಬರುವ ಪ್ರವಾಸಿಗರ ಮೇಲೆ ಹದ್ದಿನ ಕಣ್ಣೀಡಲಾಗಿದೆ.

ಬೀಕೋ ಎನ್ನುತ್ತಿವೆ ಬೀಚ್‍ಗಳು

ರಾಜ್ಯದ ಕರಾವಳಿಯ ಪ್ರಮುಖ ಪ್ರವಾಸಿ ಕೇಂದ್ರಗಳಿಗೂ ಕೊರೊನಾ ಭೀತಿ ಎದುರಾಗಿದ್ದು, ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಭಾನುವಾರ ಪ್ರವಾಸಿಗರಿಂದ ತುಂಬಿರುತ್ತಿದ್ದ ಬೀಚ್ ಇಂದು ಬಿಕೋ ಎನ್ನುತ್ತಿದೆ. ಬೀಚ್ ಪಕ್ಕದ ಹೋಟೆಲ್ ಗಳೂ ಪ್ರವಾಸಿಗರಿಲ್ಲದೆ ಖಾಲಿ ಹೊಡೆಯುತ್ತಿವೆ. ಪಣಂಬೂರು ಬೀಚ್ ಮಾತ್ರವಲ್ಲದೆ ಕಡಲ ತೀರದ ಸೋಮೇಶ್ವರ ಬೀಚ್, ಉಳ್ಳಾಲ ಬೀಚ್, ತಣ್ಣೀರು ಬಾವಿ ಬೀಚ್, ಸುರತ್ಕಲ್ ಬೀಚ್, ಸಸಿಹಿತ್ಲು ಬೀಚ್ ಸೇರಿದಂತೆ ಎಲ್ಲ ಬೀಚ್‍ಗಳು ಪ್ರವಾಸಿಗರಿಲ್ಲದೆ ಬೀಕೋ ಎನ್ನುತ್ತಿವೆ.

Comments

Leave a Reply

Your email address will not be published. Required fields are marked *