ಖಾಸಗಿ ಲ್ಯಾಬ್‍ಗಳಲ್ಲಿ ಕೊರೊನಾ ಟೆಸ್ಟ್- ಜನರ ಶುಲ್ಕ ಮರುಪಾವತಿಸಬಹುದೇ?

– ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ

ನವದೆಹಲಿ: ಖಾಸಗಿ ಲ್ಯಾಬ್ ಗಳಲ್ಲಿ ಕೊರೊನಾ ಸೋಂಕು ಪರೀಕ್ಷೆ ನಡೆಸುವ ಶುಲ್ಕವನ್ನು ಸರ್ಕಾರ ಭರಿಸಲು ಅಥವಾ ಮರುಪಾವತಿಸಲು ಸಾಧ್ಯವೇ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದೆ.

ಕೊರೊನಾ ವೈರಸ್ ಸೋಂಕು ಪರೀಕ್ಷೆ ನಡೆಸಲು ಖಾಸಗಿ ಲ್ಯಾಬ್‍ಗಳು ಹೆಚ್ಚಿನ ಹಣ ಪಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಮತ್ತು ಎಲ್ಲರಿಗೂ ಉಚಿತವಾಗಿ ಟೆಸ್ಟ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ವಕೀಲ ಶಶಾಂಕ್ ದಿಯೋ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಶೋಕ್ ಭೂಷಣ್ ನೇತೃತ್ವದ ದ್ವಿ ಸದಸ್ಯ ಪೀಠ ಕೇಂದ್ರ ಸರ್ಕಾರಕ್ಕೆ ಹೀಗೆ ಪ್ರಶ್ನಿಸಿದೆ.

ದೇಶದಲ್ಲಿ 5000 ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ. ಮತ್ತಷ್ಟು ಹೆಚ್ಚಿನ ಪರೀಕ್ಷೆಗಳು ನಡೆಯುತ್ತಿದೆ. ಪರೀಕ್ಷೆ ನಡೆಸುವ ಕೆಲ ಖಾಸಗಿ ಲ್ಯಾಬ್ ಗಳು ಹೆಚ್ಚಿನ ಹಣ ಪಡೆಯುವ ಸಾಧ್ಯತೆ ಇದಕ್ಕೆ ಕಡಿವಾಣ ಹಾಕುವಂತೆ ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿದರು.

ಇದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರದ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಖಾಸಗಿ ಲ್ಯಾಬ್ ಗಳಲ್ಲಿ ಉಚಿತ ಪರೀಕ್ಷೆ ನಡೆಸುವ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದರು. ದೇಶದ 118 ಸರ್ಕಾರಿ ಲ್ಯಾಬ್ ಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ ಇದು ಸಾಕಾಗುತ್ತಿಲ್ಲ. ಈ ಹಿನ್ನೆಲೆ ಖಾಸಗಿ 47 ಲ್ಯಾಬ್ ಗಳಿಗೆ ಪರವಾನಿಗೆ ನೀಡಿದೆ. ದೇಶದಲ್ಲಿ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆ ಖಾಸಗಿ ಲ್ಯಾಬ್ ಗಳಿಗೆ ಅವಕಾಶ ನೀಡಿದೆ ಎಂದು ವಿವರಿಸಿದರು.

ಖಾಸಗಿ ಲ್ಯಾಬ್ ಗಳು ಹೆಚ್ಚಿನ ಶುಲ್ಕ ವಿಧಿಸದಂತೆ ಎಚ್ಚರಿಕೆ ವಹಿಸಬೇಕು ಮತ್ತು ಈ ಶುಲ್ಕವನ್ನು ಸರ್ಕಾರ ಮರುಪಾವತಿ ಮಾಡುವ ಬಗ್ಗೆ ಪರಿಶೀಲಿಸಿ ಎಂದು ನ್ಯಾ. ಅಶೋಕ್ ಭೂಷಣ್ ಸಲಹೆ ನೀಡಿದರು. ಅಲ್ಲದೇ ಖಾಸಗಿ ಲ್ಯಾಬ್‍ಗಳು ಅಗತ್ಯ ಕಡೆಗಳಿಂದ ಸೂಕ್ತ ಪರವಾನಿಗೆ ಪಡೆದಿವೆಯೋ ಇಲ್ಲವೇ ಅನ್ನೊದು ಖಾತ್ರಿಪಡಿಸಿಕೊಳ್ಳಬೇಕು ಎಂದರು.

ಈ ವೇಳೆ ಅರ್ಜಿದಾರ ವಕೀಲ ಶಶಾಂಕ್ ದಿಯೋ ಖಾಸಗಿ ಲ್ಯಾಬ್ ಗಳಲ್ಲಿ ಪರೀಕ್ಷೆ ಗೆ 4, 500 ಶುಲ್ಕ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಿಗದಿ ಮಾಡಿದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥಿತ ಪರೀಕ್ಷೆಗಳು ನಡೆಯದ ಮತ್ತು ಅಲ್ಲಿ ಜನರ ಸಂಖ್ಯೆ ಹೆಚ್ವಿರುವ ಕಾರಣ ಹೆಚ್ಚಿನವರು ಖಾಸಗಿ ಲ್ಯಾಬ್ ಗಳತ್ತ ಮುಖ ಮಾಡಲಿದ್ದಾರೆ ಎಂದು ವಾದಿಸಿದರು.

Comments

Leave a Reply

Your email address will not be published. Required fields are marked *