ಕೊರೊನಾ ಕೇಸ್‍ನಲ್ಲಿ ಸಚಿವರಿಬ್ಬರ ಎಡವಟ್ಟು

– ಮಾಹಾಮಾರಿ ವಿಷ್ಯದಲ್ಲಿ ನಿರ್ಲಕ್ಷ್ಯದ ಅತಿರೇಕ

ಬೆಂಗಳೂರು: ಕೊರೊನಾ ವೈರಸ್ ವಿಷಯದಲ್ಲಿ ರಾಜ್ಯ ಸರ್ಕಾರ ಎಷ್ಟು ನಿರ್ಲಕ್ಷ್ಯವಾಗಿದೆ ಎಂದರೆ ಸಚಿವರು, ಅಧಿಕಾರಿಗಳು ಜೀವಕ್ಕೆ ಕಂಟಕವಾದ ರೋಗದ ವಿಷಯದಲ್ಲಿ ಎಡವಟ್ಟುಗಳ ಮೇಲೆ ಎಡವಟ್ಟು ಮಾಡುತ್ತಿದ್ದಾರೆ.

ಕಲಬುರಗಿಯ 76 ವರ್ಷದ ವೃದ್ಧ ಸಾವನ್ನಪ್ಪಿದ್ದು ಕೊರೊನಾ ವೈರಸ್‍ನಿಂದಲೇ ಎಂದು ಖಚಿತವಾಗಿದೆ. ಆದರೆ ಸೋಂಕು ಶಂಕಿತ ವ್ಯಕ್ತಿಗೆ ಕೊರೊನಾ ವೈರಸ್ ಬಂದೇ ಇಲ್ಲ ಎಂದು ಸಚಿವರುಗಳು ತಿಳಿಸಿದ್ದಾರೆ. ಅಲ್ಲದೇ ಸೋಂಕು ಪೀಡಿತ ಮೃತಪಟ್ಟು, ಮೂರು ದಿನಗಳ ಬಳಿಕ ಕೊರೊನಾ ಸೋಂಕುನಿಂದಲೇ ಮೃತಪಟ್ಟಿರೋದು ದೃಢಪಟ್ಟಿದೆ. ಮೃತಪಟ್ಟ ವ್ಯಕ್ತಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಫೆ. 29ರಿಂದ ವ್ಯಕ್ತಿ ಸಾಯುವ ಅಂತಿಮ ಕ್ಷಣದವರೆಗೆ ವ್ಯಕ್ತಿಯ ಸಂಪರ್ಕದಲ್ಲಿದ್ದರಿಗೂ ಕೊರೊನಾ ಸೊಂಕು ಹರಡಿರುವ ಸಾಧ್ಯತೆ ಇದೆ.

ಮೃತ ವೃದ್ಧ, ಹತ್ತು ದಿನಗಳ ಅವಧಿಯಲ್ಲಿ ಮೂರು ಆಸ್ಪತ್ರೆಯ ಸಿಬ್ಬಂದಿ, ಸಂಬಂಧಿಕರು, ಕುಟುಂಬಸ್ಥರನ್ನ ಸಂಪರ್ಕಿಸಿರುವ ಸಾಧ್ಯತೆ ಇದೆ. ಇದು ತೀವ್ರ ಆತಂಕಕ್ಕೀಡಾಗುವ ವಿಚಾರವಾಗಿದೆ. ಹೀಗಾಗಿ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದವರ ಮಾಹಿತಿ ಸಂಗ್ರಹಿಸಿ ಪ್ರತ್ಯೇಕ ನಿಗಾ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿತ್ತು. ಆದರೆ ವ್ಯಕ್ತಿಯ ಅಂತ್ಯಕ್ರಿಯೆ ವೇಳೆಯಲ್ಲೂ ಯಾವುದೇ ಮುನ್ನಚ್ಚರಿಕಾ ಕ್ರಮ ಕೈಗೊಂಡಿರಲಿಲ್ಲ.

ಕಲಬುರಗಿ ಜಿಲ್ಲಾಡಳಿತ, ಸೋಂಕು ಪೀಡಿತ ಎಂದು ಗುರುತಿಸಿದ್ದರೂ ಸಚಿವರು ಗಂಭೀರವಾಗಿ ಪರಿಗಣಿಸಿರಲಿಲ್ಲ. ವೈದ್ಯಾಧಿಕಾರಿಗಳ ತಂಡ ಮೃತ ವ್ಯಕ್ತಿಯ ಗಂಟಲು ದ್ರವ, ರಕ್ತದ ಮಾದರಿ ಸಂಗ್ರಹ ಕಲಬುರಗಿಯಿಂದ ಬೆಂಗಳೂರಿಗೆ ತಡವಾಗಿ ಕಳಿಸಿದ್ದರು. ಹೀಗಾಗಿ ಈ ವಿಳಂಬವೇ ಅನಾಹುತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಸಚಿವರ ಎಡವಟ್ಟು:
* ವ್ಯಕ್ತಿ ಆಸ್ಪತ್ರೆಗೆ ದಾಖಲಾದ ಬಳಿಕ ವೈದ್ಯರು ಕೊರೊನಾ ಸೋಂಕು ಶಂಕಿತ ಅಂತ ಡಿಕ್ಲೇರ್ ಮಾಡಿದ್ದಾರೆ. ಆದರೆ ಆತನ ರಿಪೋರ್ಟ್ ಬರುವ ಮುನ್ನವೇ ಐಸೋಲೇಷನ್ ಸೆಂಟರ್ ನಿಂದ ಕುಟುಂಬಸ್ಥರು ಹೇಳಿದರು ಅಂತ ಹೈದರಾಬಾದ್‍ಗೆ ಶಿಫ್ಟ್ ಮಾಡಲಾಗಿತ್ತು.

* ಸೋಂಕು ಶಂಕಿತರನ್ನು 28 ದಿನ ಪ್ರತ್ಯೇಕಿಸಿ ನಿಗಾದಲ್ಲಿ ಇಡಬೇಕು. ಆದರೆ ಈ ಸೋಂಕು ಪೀಡಿತನನ್ನು ರಿಪೋರ್ಟ್ ಬಾರದೇ ಒಂದೇ ದಿನದಲ್ಲಿ ಡಿಸ್ಜಾರ್ಜ್ ಮಾಡಿದ್ದು ಹೇಗೆ? ಇದು ಸ್ಥಳೀಯ ಡಿಸಿ, ಆರೋಗ್ಯಾಧಿಕಾರಿಗಳ ಗಮನಕ್ಕೆ ಬಂದಿರಲಿಲ್ವೇ? ಎಂಬ ಪ್ರಶ್ನೆ ಮೂಡಿದೆ.

* ಕೊರೊನಾ ಸಾಂಕ್ರಾಮಿಕ ರೋಗವಾಗಿದ್ದರಿಂದ ಆಸ್ಪತ್ರೆಯವರಿಗೆ, ಆರೋಗ್ಯಾಧಿಕಾರಿಗಳಿಗೆ ಆತನನ್ನು ಬಲವಂತವಾಗಿ ಆಸ್ಪತ್ರೆಯಲ್ಲಿ ಇರಿಸುವಂತಹ ಅಧಿಕಾರ ಇದ್ದರೂ ಯಾಕೆ ಬಳಕೆ ಮಾಡಲಿಲ್ಲ?

* ಸೋಂಕು ಪೀಡಿತ ಸಾವನ್ನಪ್ಪಿದಾಗ ಕಲಬುರಗಿ ಆರೋಗ್ಯಾಧಿಕಾರಿಗಳು ಆತನ ಅಂತ್ಯಕ್ರಿಯೆ ವೇಳೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸುತ್ತೋಲೆ ಹೊರಡಿಸಿದರು. ಆದರೆ ರಿಪೋರ್ಟ್ ಬಾರದೇ ಇದ್ದರೂ ಏಕಾಏಕಿ ಸುದ್ದಿಗೋಷ್ಠಿ ಕರೆದ ಸಚಿವರು ಆತನಿಗೆ ಕೊರೊನಾ ಗಿರೋನಾ ಏನಿಲ್ಲ, ವಯಸ್ಸಾಗಿತ್ತು, ಅಸ್ತಮಾ ಸಮಸ್ಯೆ ಇತ್ತು ಎಂದು ಹೇಳಿದ್ದಾರೆ.

* ಕಲಬುರಗಿಯಲ್ಲಿ ಆರೋಗ್ಯಾಧಿಕಾರಿಗಳು ಆತನ ಅಂತ್ಯಕ್ರಿಯೆಯ ವೇಳೆ ಯಾವ ಮುನ್ನೆಚ್ಚರಿಕೆಯನ್ನೂ ತೆಗೆದುಕೊಳ್ಳಲಿಲ್ಲ. ಆತನ ಮೃತದೇಹವನ್ನು ರವಾನಿಸಿದ ಅಂಬುಲೆನ್ಸ್ ಡ್ರೈವರ್ ಕೂಡ ಮಾಸ್ಕ್ ಧರಿಸಿರಲಿಲ್ಲ.

 

* ಗೈಡ್ ಲೈನ್ಸ್ ಪ್ರಕಾರ ಸೋಂಕು ಪೀಡಿತನ ಅಂತ್ಯಕ್ರಿಯೆಯ ವೇಳೆ, ಅಂತ್ಯಕ್ರಿಯೆ ನಡೆಸುವವರು ಕೈಗೆ ಗ್ಲೌಸ್ ಮುಖಕ್ಕೆ ಮಾಸ್ಕ್ ಹಾಗೂ ಕಾಲು ಮುಚ್ಚುವ ಶೂ ಧರಿಸಬೇಕು. ಅಂತ್ಯಕ್ರಿಯೆ ಮುಗಿದ ಬಳಿಕ ಸೂಕ್ತ ವಿಲೇವಾರಿ ನಡೆಸಬೇಕು. ಆದರೆ ಈತನ ಅಂತ್ಯಕ್ರಿಯೆಯಲ್ಲಿ ಈ ಪ್ರಕ್ರಿಯೆ ಕಾಣಿಸಲೇ ಇಲ್ಲ. ಆತನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡವರಿಂದ ಹಿಡಿದು ಯಾರೂ ಕೂಡ ಮಾಸ್ಕ್ ಧರಿಸಿರಲಿಲ್ಲ

* ಸೋಂಕು ಶಂಕೆ ಎಂದು ಗೊತ್ತಾಗಿ ಆತ ಸಾವನ್ನಪ್ಪಿದ ಮೇಲೂ ಆತನ ರಿಪೋರ್ಟ್ ತರಿಸುವುದಕ್ಕೆ ತಡ ಮಾಡಿದ್ದಾರೆ. ರಿಪೋರ್ಟ್ ಗೂ ಮುನ್ನವೇ ಸಚಿವರುಗಳ ಎಡವಟ್ಟು ಹೇಳಿಕೆಯಿಂದ ಆರೋಗ್ಯಾಧಿಕಾರಿಗಳು ಆತ ವಾಸವಿದ್ದ ಮನೆ, ಏರಿಯಾವನ್ನು ಫ್ಯೂಮಿಗೇಷನ್ ಮಾಡುವ ಕೆಲಸಕ್ಕೂ ಕೈ ಹಾಕಿರಲಿಲ್ಲ. ಕೊರೊನಾದ ಮೊದಲ ಸಾವು ರಾಜ್ಯ ಸರ್ಕಾರದ ವೈಫಲ್ಯವನ್ನು ಸಾರಿದೆ.

 

Comments

Leave a Reply

Your email address will not be published. Required fields are marked *