ಕೊರೊನಾದಿಂದ ಸಾವನ್ನಪ್ಪಿದ ವೃದ್ಧನ ಟ್ರಾವೆಲ್ ಹಿಸ್ಟರಿ – ಸೋಂಕಿತ ಯಾವ ದಿನ? ಎಲ್ಲೆಲ್ಲಿ ಭೇಟಿ?

-ಬೆಚ್ಚಿ ಬೀಳುವ ಸಂಗತಿಗಳು ಬಯಲು

ಕಲಬುರಗಿ: ಕೊರೊನಾ ವೈರಸ್‍ನಿಂದ 76 ವರ್ಷದ ವೃದ್ಧ ಸಾವನ್ನಪ್ಪಿದ ಪ್ರಕರಣ ಸಂಬಂಧ ಇನ್ನಷ್ಟು ಮಾಹಿತಿ ಲಭ್ಯವಾಗಿದೆ. ವೃದ್ಧ ಪ್ರವಾಸದಿಂದ ಬಂದ ನಂತರ ಎಲ್ಲೆಲ್ಲಿ ಹೋಗಿದ್ದರು ಎಂಬ ಬಗ್ಗೆ ಅಧಿಕೃತ ಟ್ರಾವೆಲ್ ಹಿಸ್ಟರಿಯನ್ನ ಆರೋಗ್ಯ ಇಲಾಖೆ ಬಿಚ್ಚಿಟ್ಟಿದೆ.

ವೃದ್ಧನ ಟ್ರಾವೆಲ್ ಹಿಸ್ಟರಿ ಗಮನಿಸಿದಾಗ ಬೆಚ್ಚಿ ಬೀಳುವ ಸಂಗತಿಗಳು ಬಯಲಾಗಿವೆ. ಫೆಬ್ರವರಿ 29ರಂದು ಮಧ್ಯಾಹ್ನ 12:30ಕ್ಕೆ ಸೌದಿಯಿಂದ ಹೈದರಾಬಾದ್‍ಗೆ ಬಂದಿದ್ದ ವೃದ್ಧ ನಗರದ ಪಟೆಂಚರು ಬಳಿ ಚಹಾ ಕುಡಿದಿದ್ದರು. ಚಹಾ ಕುಡಿದ ಬಳಿಕ ಕಾರ್ ನಲ್ಲಿ ಕಲಬುರಗಿ ಕಡೆಗೆ ರಸ್ತೆ ಮಾರ್ಗದಲ್ಲಿ ಪಯಣ ಬೆಳೆಸಿದರು. ಮಾರ್ಗ ಮಧ್ಯದಲ್ಲಿ ಕಾರ್ ನಿಲ್ಲಿಸಿ ಕಮಲಾಪುರ ತಾಲೂಕಿನ ಢಾಬಾದಲ್ಲಿ ಮಧ್ಯಾಹ್ನ 3:30 ರಿಂದ 4:30ರವರೆಗೂ ಊಟ ಮಾಡಿದ್ದರು. ಢಾಬಾದಲ್ಲಿ ನಾನ್ ವೆಜ್ ಊಟ ಮಾಡಿದ ಬಳಿಕ ಮತ್ತೆ ಕಲಬುರಗಿಯತ್ತ ಪ್ರಯಾಣ ಬೆಳೆಸಿದರು. ಸಂಜೆ 5 ಗಂಟೆಗೆ ಮನೆ ತಲುಪಿದ್ದರು.

ಫೆಬ್ರವರಿ 29ರಿಂದ ಮಾರ್ಚ್ 6ವರೆಗೆ ಕಲಬುರಗಿಯ ನಿವಾಸದಲ್ಲೇ ವೃದ್ಧ ವಾಸವಿದ್ದರು. ಮಾರ್ಚ್ 6ರಂದು ಜ್ವರದಿಂದ ಬಳಲುತ್ತಿದ್ದ ಅವರಿಗೆ ಫ್ಯಾಮಿಲಿ ಡಾಕ್ಟರ್ ಮನೆಗೆ ಬಂದು ತಪಾಸಣೆ ಮಾಡಿದ್ದರು. ಮಾರ್ಚ್ 9ರವರೆಗೆ ಮನೆಯಲ್ಲೇ ಫ್ಯಾಮಿಲಿ ಡಾಕ್ಟರ್ ತಪಾಸಣೆ ಮಾಡಿದ್ದರು. ಜ್ವರ, ಕೆಮ್ಮು, ನೆಗಡಿ ಕಮ್ಮಿಯಾಗದ ಹಿನ್ನೆಲೆ ಮಾರ್ಚ್ 9ರಂದು ಖಾಸಗಿ ಆಸ್ಪತ್ರೆಗೆ ವೃದ್ಧರನ್ನ ಶಿಫ್ಟ್ ಮಾಡಲಾಯ್ತು. ಬಳಿಕ ಮಾರ್ಚ್ 9ರಂದು ರಾತ್ರಿ 10 ಗಂಟೆಗೆ ವೃದ್ಧರನ್ನ ಡಿಸ್ಚಾರ್ಜ್ ಮಾಡಿಸಿಕೊಂಡು ಕುಟುಂಬಸ್ಥರು ಕಲಬುರಗಿಯಿಂದ ನೇರವಾಗಿ ಹೈದರಾಬಾದ್‍ಗೆ ತೆರಳಿದ್ದರು.

ಮಾರ್ಚ್ 10 ರಂದು ಹೈದರಾಬಾದ್‍ನ ಕೇರ್ ಆಸ್ಪತ್ರೆಯಲ್ಲಿ ವೃದ್ಧ ಚಿಕಿತ್ಸೆಗೆ ದಾಖಲಾದರು. ಹೈದರಾಬಾದ್ ಕೇರ್ ಆಸ್ಪತ್ರೆಗೆ ದಾಖಲಿಸಿದ ಬೆನ್ನಲ್ಲೆ ಪರಿಸ್ಥಿತಿ ತೀರ ಹದಗೆಟ್ಟಿತ್ತು, ಈ ಹಿನ್ನೆಲೆ ವಾಪಸ್ ಕಲಬುರಗಿಗೆ ಕರೆದುಕೊಂಡು ಬರಲು ಕುಟುಂಬಸ್ಥರು ನಿರ್ಧರಿಸಿದರು. ಮಾರ್ಚ್ 10ರ ಸಂಜೆ ಹೈದರಾಬಾದ್‍ನ ಕೇರ್ ಆಸ್ಪತ್ರೆಯಿಂದ ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಬರುವಾಗಲೇ ವೃದ್ಧ ಸಾವನ್ನಪ್ಪಿದ್ದರು.

ಈ ಬಗ್ಗೆ ತಿಳಿಯದೇ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಅವರನ್ನು ಕುಟುಂಬ ದಾಖಲಿಸಿತು. ಈ ವೇಳೆ ಜಿಮ್ಸ್ ಆಸ್ಪತ್ರೆಯ ವೈದ್ಯರು ವೃದ್ಧ ಸಾವನ್ನಪ್ಪಿರುವ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದರು. ಮಾರ್ಚ್ 11ರಂದು ವೃದ್ಧನ ಅಂತ್ಯಕ್ರಿಯೆ ನಡೆದಿತ್ತು. ಆದರೆ ಮಾರ್ಚ್ 12ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತೆಲಂಗಾಣ ಸರ್ಕಾರಕ್ಕೆ ಕ್ರಾಸ್ ನೋಟಿಫಿಕೆಷನ್ ನೀಡಲಾಯಿತು. ವೃದ್ಧನ ಜೊತೆ ಸಂಪರ್ಕ ಹೊಂದಿದ್ದ 71 ಜನರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದ್ದು, ವೃದ್ಧನ ಕುಟುಂಬ, ಅವರು ವಾಸವಿದ್ದ ಏರಿಯಾ ಜನ ಸೇರಿ ಅಂತ್ಯಕ್ರಿಯೆಯಲ್ಲಿ ಭಾಗಿಯಾದವರ ಮೇಲೆ ನಿಗಾ ವಹಿಸಲಾಗಿದೆ.

ಆದರೆ ವೃದ್ಧ ಊಟ ಮಾಡಿದ್ದ ಢಾಬಾದ ಕೆಲಸಗಾರರ ಸಂಪರ್ಕವೇ ಮಾಡಲಿಲ್ವಾ ಆರೋಗ್ಯ ಇಲಾಖೆ ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಜಿಲ್ಲಾಡಳಿತ ನೀಡಿರುವ ಮಾಹಿತಿಯಲ್ಲಿ ಢಾಬಾದಲ್ಲಿ ಕೆಲಸ ಮಾಡಿರುವವರ ಬಗ್ಗೆ ತಪಾಸಣೆ ನಡೆಸಿರುವ ಯಾವುದೇ ಉಲ್ಲೆಖವಿಲ್ಲ. ಹಾಗಾದರೆ ಢಾಬಾದಲ್ಲಿ ವೃದ್ಧನಿಗೆ ಊಟ ಸಪ್ಲೈ ಮಾಡಿದ ವೇಟರ್, ಬಿಲ್ ಕೌಂಟರ್ ನಲ್ಲಿ ಬಿಲ್ ಪಡೆದವರನ್ನ ಸಂಪರ್ಕ ಮಾಡಲಿಲ್ಲವಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

Comments

Leave a Reply

Your email address will not be published. Required fields are marked *