ಒಂದು ಕೊರೊನಾ ಸಾವಿನಿಂದ ಡೇಂಜರ್ ಝೋನ್‍ನಲ್ಲಿ ಕಲಬುರಗಿ – ಅಧಿಕಾರಿಗಳು ಎಡವಿದ್ದು ಎಲ್ಲಿ?

ಕಲಬುರಗಿ: ಕೊರೊನಾ ವೈರಸ್‍ನಿಂದ ಕಲಬುರಗಿಯ ವ್ಯಕ್ತಿ ಮೃತಪಟ್ಟಿದ್ದು, ಇದರಿಂದ ಇಡೀ ಕಲಬುರಗಿ ಜಿಲ್ಲೆ ಡೇಂಜರ್ ಝೋನ್‍ನಲ್ಲಿ ಇದೆ ಎಂದು ಹೇಳಲಾಗುತ್ತಿದೆ.

ಕೊರೊನಾ ಸೋಂಕಿತ ಅಂತ್ಯಸಂಸ್ಕಾರದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು. ಈ ವೇಳೆ ಜಿಲ್ಲಾಡಳಿತ ಯಾವುದೇ ಮುಂಜಾಗೃತ ಕ್ರಮಗಳನ್ನು ಕೈಗೊಂಡಿರಲಿಲ್ಲ. ಅಂತ್ಯಸಂಸ್ಕಾರಕ್ಕೆ ಬಂದ ಸಂಬಂಧಿಕರು ಮೃತ ವ್ಯಕ್ತಿಯ ಕಾಲು ಮುಟ್ಟಿ ನಮಸ್ಕರಿಸಿದ್ದರು. ಇದರಿಂದ ಬೇರೆಯವರಿಗೂ ಕೊರೊನಾ ಹರಡುವ ಸಾಧ್ಯತೆಗಳಿವೆ.

ಮೃತ ವೃದ್ಧನ ಸಾವಿನ ನಂತರ ಆರೋಗ್ಯ ಇಲಾಖೆ ಸಂಪೂರ್ಣ ನಿರ್ಲಕ್ಷ್ಯವಹಿಸಿದೆ. ಹೈದರಾಬಾದ್‍ನಿಂದ ರಸ್ತೆ ಮಾರ್ಗವಾಗಿ ವೃದ್ಧ ಸಾವನಪ್ಪಿರುವ ಸುದ್ದಿ ತಿಳಿದ ತಕ್ಷಣ ಮೃತ ವ್ಯಕ್ತಿಯ ಶವವನ್ನು ಕಲಬುರಗಿಯ ಜೀಮ್ಸ್ ಶವಗಾರದಲ್ಲಿ ತಂದು ಇಡಲಾಗಿದೆ. ನಂತರ ಅಂಬುಲೆನ್ಸ್ ಮೂಲಕ ಶವವನ್ನು ಸಾಗಿಸಿ ಅಂತ್ಯಸಂಸ್ಕಾರ ಮಾಡಲಾಗಿದೆ. ಅಧಿಕಾರಿಗಳ ಈ ನಿರ್ಲಕ್ಷ್ಯತನದಿಂದ ಮೃತ ವ್ಯಕ್ತಿಯಿಂದಾಗಿ ಈಗ ಕಲಬುರಗಿ ಜಿಲ್ಲೆಯ ಹಲವರಿಗೆ ಕೊರೊನಾ ಬರುವ ಶಂಕೆ ಹೆಚ್ಚಾಗಿದೆ.

ಅಧಿಕಾರಿಗಳು ಎಡವಿದ್ದೆಲ್ಲಿ?
1. ಮೃತ ವೃದ್ಧನ ಜೊತೆ ಬರುವ ಸಂಬಂಧಿಕರಿಗೆ ಅಂಬುಲೆನ್ಸ್ ಯಾವ ಮಾಸ್ಕ್ ನೀಡಿರಲಿಲ್ಲ.
2. ಶವ ಸಾಗಿಸಿದ ಅಂಬುಲೆನ್ಸ್ ಡ್ರೈವರ್ ಗೂ ಎನ್-95 ಕಿಟ್ ವಿತರಿಸಿಲ್ಲ
3. ಶವ ಸಾಗಾಟ ನಂತರ ಅಂಬುಲೆನ್ಸ್ ಯಾವ ಸ್ವಚ್ಛತೆ ಕಾರ್ಯ ಸಹ ನಡೆಸಿಲ್ಲ
4. ಶವಗಾರದ ಸುತ್ತಲಿರುವ ಇತರೆ ಜನರಿಗೆ ಜಾಗೃತಿ ನೀಡಲಿಲ್ಲ.
5. ಕೊರೊನಾ ಕಾಯಿಲೆಯಿಂದ ಮೃತಪಟ್ಟ ಶವವನ್ನು ಕುಟುಂಬಸ್ಥರಿಂದಲೇ ಸ್ನಾನ ಮಾಡಿಸಲಾಗಿದೆ.
6. ಮೃತನ ಶರೀರವನ್ನು ಸಂಪೂರ್ಣ ಪ್ಯಾಕ್ ಮಾಡಿರಲಿಲ್ಲ.
7. ಮೃತದೇಹ ಸಾಗಿಸಲು ಬಳಸಿದ ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್‍ಗಳನ್ನು ನಾಶಪಡಿಸಿಲ್ಲ.
8. ಮೃತ ವ್ಯಕ್ತಿ ಹೋಟೆಲ್,ಕಿರಾಣಿ ಅಂಗಡಿ, ಸೇರಿದಂತೆ ಇತರೆಡೆ ಭೇಟಿ ನೀಡಿದ್ದ ವಿಚಾರ ಗೊತ್ತಾಗಿದೆ. ಆದರೆ ಈ ಬಗ್ಗೆ ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು ಈಗ ಎಚ್ಚರಗೊಂಡು ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ.
9. ಮೃತ ವ್ಯಕ್ತಿಯ ಬಡಾವಣೆಯ ಯಾವ ಜನರನ್ನು ಕೊರೊನಾ ಕಾಯಿಲೆ ಬಗ್ಗೆ ಪರೀಕ್ಷೆ ನಡೆಸಿಲ್ಲ.

ಮೃತ ವ್ಯಕ್ತಿಯ ಒಟ್ಟು 46 ನಿಕಟವರ್ತಿಗಳನ್ನು ಚಿಕಿತ್ಸೆಗೆ ಒಳಪಡಿಸಿದ್ದು, ಅದರಲ್ಲಿ ಮೂರು ಜನರಿಗೆ ನೆಗಡಿ ಬಂದಿದ್ದರೆ ಓರ್ವ ಜ್ವರದಿಂದ ಬಳಲುತ್ತಿದ್ದಾನೆ. ಈಗ ಜಿಲ್ಲಾಡಳಿತ ಕಫ ಮಾದರಿಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದೆ.

Comments

Leave a Reply

Your email address will not be published. Required fields are marked *