ಮೆಕ್ಕೆಜೋಳದ ಹೊಲದಲ್ಲಿ ವಿಮಾನ ಲ್ಯಾಂಡ್ – 233 ಪ್ರಯಾಣಿಕರ ಜೀವ ಉಳಿಸಿದ ಪೈಲೆಟ್

ಮಾಸ್ಕೋ: 233 ಪ್ರಯಾಣಿಕರನ್ನು ಹೊತ್ತ ರಷ್ಯನ್ ವಿಮಾನವೊಂದು ಆಶ್ಚರ್ಯಕರ ರೀತಿಯಲ್ಲಿ ಲ್ಯಾಂಡ್ ಆಗಿದ್ದು, ಮೆಕ್ಕೆಜೋಳದ ಹೊಲದಲ್ಲಿ ಪೈಲೆಟ್ ವಿಮಾನವನ್ನು ತುರ್ತು ಲ್ಯಾಂಡ್ ಮಾಡಿ ಪ್ರಯಾಣಿಕರ ಜೀವವನ್ನು ಉಳಿಸಿದ್ದಾರೆ.

ವಿಮಾನ ಟೇಕ್ ಆಫ್ ಆದ ಸ್ವಲ್ಪ ಹೊತ್ತಲ್ಲೇ ಹಕ್ಕಿಗಳ ಹಿಂಡೊಂದು ವಿಮಾನಕ್ಕೆ ಅಪ್ಪಳಿಸಿದ ಪರಿಣಾಮ ಪೈಲೆಟ್ ಮಾಸ್ಕೋದ ಹೊರವಲಯದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದ್ದು, ಮೆಕ್ಕೆಜೋಳದ ಹೊಲದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ಓರ್ವ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು, ಉಳಿದವರೆಲ್ಲರೂ ಸುಕ್ಷಿತವಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಈ ಕುರಿತು ರಷ್ಯಾದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಉರಲ್ ಏರ್ ಲೈನ್ಸ್ ನ  ಏರ್ ಬಸ್ 321 ವಿಮಾನಕ್ಕೆ ಹಕ್ಕಿಗಳ ಗುಂಪೊಂದು ಅಪ್ಪಳಿಸಿದ ಪರಿಣಾಮ ವಿಮಾನದ ಎಂಜಿನ್‍ಗೆ ಅಡಚಣೆ ಉಂಟಾಗಿ ಮಾಸ್ಕೋದ ಹೊರವಲಯದಲ್ಲಿ ವಿಮಾನ ಎಮರ್ಜೆನ್ಸಿ ಲ್ಯಾಂಡ್ ಆಗಿದ್ದು, ವಿಮಾನ ಸುಕ್ಷಿತವಾಗಿ ಲ್ಯಾಂಡ್ ಆಗಿದೆ. 23 ಪ್ರಯಾಣಿಕರಿಗೆ ಗಾಯಗಳಾಗಿದ್ದು, ಯಾರೂ ಸಾವನ್ನಪ್ಪಿಲ್ಲ ಎಂದು ಸ್ಪಷ್ಟಪಡಿಸಿದೆ.

ವಿಮಾನ ಎಮರ್ಜೆನ್ಸಿ ಲ್ಯಾಂಡ್ ಆಗಿರುವುದನ್ನು ಅಲ್ಲಿನ ಟಿವಿ ವಾಹಿನಿಗಳು ಪವಾಡ ಎಂದು ಬಣ್ಣಿಸುತ್ತಿವೆ. ವಿಮಾನವು ಝುಕೋವಸ್ಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿ ಸುಮಾರು 1 ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸಿದ ನಂತರ ತುರ್ತು ಲ್ಯಾಂಡ್ ಆಗಿದೆ.

https://twitter.com/NDasner/status/1161965300952248321

ಟಾಬ್ಲಾಯ್ಡ್ ಪತ್ರಿಕೆಯೊಂದು ಪೈಲೆಟ್ ದಮೀರ್ ಯೂಸುಪೋವ್ ಅವರನ್ನು ಹೀರೋ ಎಂದು ಬಣ್ಣಿಸಿದೆ. ಪೈಲೆಟ್ 233 ಜೀವಗಳನ್ನು ಉಳಿಸಿದ್ದಾರೆ. ಎಂಜಿನ್ ಫೇಲ್ ಆದ ನಂತರವೂ ವಿಮಾನವನ್ನು ಲ್ಯಾಂಡಿಂಗ್ ಗೇರ್ ಇಲ್ಲದೆ ಸುರಕ್ಷಿತವಾಗಿ ಮೆಕ್ಕೆಜೋಳದ ಪ್ರದೇಶದಲ್ಲಿ ಇಳಿಸುವ ಕೌಶಲ್ಯ ತೋರಿಸಿದ್ದಾರೆ ಎಂದು ಶ್ಲಾಘಿಸಲಾಗಿದೆ.

2009ರಲ್ಲಿ ಯು.ಎಸ್.ಏರ್‌ವೇಸ್‌ನ 1549 ವಿಮಾನಕ್ಕೆ ಇದೇ ರೀತಿ ಹಕ್ಕಿಗಳು ಅಪ್ಪಳಿಸಿದ್ದವು. ಆಗ ವಿಮಾನವನ್ನು ಹಡ್ಸನ್ ನದಿಯಲ್ಲಿ ಲ್ಯಾಂಡ್ ಮಾಡಲಾಗಿತ್ತು. ಈ ಘಟನೆಯನ್ನು ಸಹ ಹಲವರು ನೆನಪಿಸಿಕೊಂಡಿದ್ದಾರೆ.

https://twitter.com/Atlantide4world/status/1161951623784148993

ತುರ್ತು ಲ್ಯಾಂಡ್ ಮಾಡಿದಾಗ ವಿಮಾನದ ಎಂಜಿನ್‍ನ್ನು ಬಂದ್ ಮಾಡಲಾಗಿತ್ತು. ಅಲ್ಲದೆ, ವಿಮಾನ ಲ್ಯಾಂಡಿಂಗ್ ಗೇರ್ ಹೊಂದಿತ್ತು ಎಂದು ರಷ್ಯಾದ ನಾಗರಿಕ ವಿಮಾನಯಾನ ಪ್ರಾಧಿಕಾರದ ವಕ್ತಾರ ಅಲೆನಾ ಮಿಖೇಯೇವಾ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *