ಮದ್ವೆಯಾಗಲು ಒಪ್ಪದಿದ್ದಕ್ಕೆ ಪ್ರಿಯತಮೆಗೆ ಥಳಿಸಿ, ಮೊಣಕಾಲಿಂದ ಪಂಚ್ ಕೊಟ್ಟ!

– ಪೊಲೀಸ್ ಅಧಿಕಾರಿ ಮಗ ಅರೆಸ್ಟ್

ನವದೆಹಲಿ: ಯುವತಿಯೊಬ್ಬಳಿಗೆ ಹಿಗ್ಗಾಮುಗ್ಗಾ ಥಳಿಸಿ ಮುಖಕ್ಕೆ ಪಂಚ್ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಯ ಮಗನನ್ನು ಬಂಧಿಸಲಾಗಿದ್ದು, ಪ್ರಿಯತಮೆ ಮದುವೆಯಾಗಲು ಒಪ್ಪದಿದ್ದಕ್ಕೆ ಈ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.

ಆರೋಪಿ 21 ವರ್ಷದ ತೋಮರ್, ಯುವತಿ ಮೇಲೆ ಹಲ್ಲೆಗೈದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ದೆಹಲಿ ಪೊಲೀಸ್ ಕಮಿಷನರ್ ಅಮೂಲ್ಯ ಪಟ್ನಾಯಕ್ ಅವರಿಗೆ ಕರೆ ಮಾಡಿ, ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.

ಮೊದಲು ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸದೇ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ. ಆ ಬಳಿಕ ಬೆದರಿಕೆ ಹಾಕಿದ ವಿಡಿಯೋವೊಂದು ಹುಡುಗಿಯ ಮೊಬೈಲ್ ಗೆ ಬಂದಿದೆ. ಇದರಿಂದ ಗಾಬರಿಗೊಂಡ 22 ವರ್ಷದ ಯುವತಿ ಮಂಗಳವಾರ ತಿಲಕ್ ನಗರದ ಪೊಲೀಸ್ ಠಾಣೆಗೆ ತೆರಳಿ ಬೆದರಿಕೆ ಹಾಕಿರುವ ಕುರಿತು ತೋಮರ್ ವಿರುದ್ಧ ದೂರು ದಾಖಲಿಸಿದ್ದಾಳೆ. ಇದನ್ನೂ ಓದಿ: ಪೊಲೀಸ್ ಅಧಿಕಾರಿ ಮಗನಿಂದ ಹುಡ್ಗಿಗೆ ಹಿಗ್ಗಾಮುಗ್ಗಾ ಥಳಿತ, ಮೊಣಕಾಲಿನಿಂದ ಮುಖಕ್ಕೆ ಪಂಚ್!

ದೂರಿನಲ್ಲಿ ಏನಿದೆ?:
ತೋಮರ್ ಹಾಗೂ ನಾನು ಕಳೆದ ಒಂದೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದೆವು. ಆದ್ರೆ ಕಳೆದ ತಿಂಗಳು ನಮ್ಮಿಬ್ಬರ ಮಧ್ಯೆ ಬ್ರೇಕಪ್ ಆಗಿದೆ. ಯಾಕಂದ್ರೆ ನನ್ನ ಮನೆಯವರು ನಮ್ಮಿಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆ ಬಳಿಕದಿಂದ ತೋಮರ್ ನನಗೆ ಬೆದರಿಕೆ ಹಾಕುತ್ತಿದ್ದಾನೆ ಅಂತ ದೂರಿನಲ್ಲಿ ಯುವತಿ ತಿಳಿಸಿದ್ದಾಳೆ.

ಇಷ್ಟು ಮಾತ್ರವಲ್ಲದೇ ನಾನು ನೆಲೆಸಿದ್ದ ಕಾಲೊನಿಗೆ ಆಗಾಗ ಬಂದು ನಮ್ಮ ಮನೆಗೆ ಕಲ್ಲು ತೂರಾಟ ಮಾಡುತ್ತಾನೆ. ನನ್ನ ತಾಯಿ ಮೇಲೆಯೂ ಹಲ್ಲೆ ಮಾಡಿದ್ದಾನೆ. 4 ದಿನದ ಹಿಂದೆ ಆತ ವಾಟ್ಸಪ್ ಗೆ ಒಂದು ವಿಡಿಯೋ ಕಳುಹಿಸಿದ್ದಾನೆ. ಅದರಲ್ಲಿ, ಒಂದು ವೇಳೆ ನಾನು ಆತನನ್ನು ಮದುವೆಯಾಗದಿದ್ದರೆ ನನಗೆ ಚೆನ್ನಾಗಿ ಥಳಿಸಿ, ಅದನ್ನು ವಿಡಿಯೋ ಮಾಡಿ ಬಳಿಕ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುವ ಮೂಲಕ ನನ್ನ ಹೆಸರಿಗೆ ಧಕ್ಕೆ ತರುವುದಾಗಿ ಬೆದರಿಕೆ ಹಾಕಿದ್ದಾನೆ ಅಂತ ಯುವತಿ ಪೊಲೀಸರಲ್ಲಿ ದುಃಖ ತೋಡಿಕೊಂಡಿದ್ದಾಳೆ.

ಯುವತಿಯ ದೂರಿನಂತೆ ಪೊಲೀಸರು ತೋಮರ್ ನನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದ್ದಾರೆ. ಕೆಲ ಗಂಟೆಗಳ ಬಳಿಕ ಯುವತಿ, ಆರೋಪಿ ತೋಮರ್ ತಂದೆ ಸಹಾಯಕ ಸಬ್ ಇನ್ಸ್ ಪೆಕ್ಟರ್ ವಿರುದ್ಧವೂ ದೂರು ದಾಖಲಿಸಿದ್ದಾಳೆ. ಅದರಲ್ಲಿ ಆರೋಪಿ ತಂದೆಯೂ ಬೆದರಿಕೆ ಹಾಕಿರುವುದಾಗಿ ದೂರಿದ್ದಾಳೆ. ಬಳಿಕ ಶುಕ್ರವಾರ ಉತ್ತಮ್ ನಗರ್ ಪೊಲೀಸ್ ಠಾಣೆಗೆ ತೆರಳಿ ಆರೋಪಿ ತೋಮರ್ ವಿರುದ್ಧ ಅತ್ಯಾಚಾರ ದೂರು ದಾಖಲಿಸಿಕೊಳ್ಳುವಂತೆ ಕೇಳಿಕೊಂಡಿದ್ದಾಳೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *