ಫೋಟೋ: 6 ದಿನದ ಬಳಿಕ ನಾಪತ್ತೆಯಾಗಿದ್ದ 17ರ ವಿದ್ಯಾರ್ಥಿನಿ ಅಮ್ಮನ ಮಡಿಲು ಸೇರಿದ ಕ್ಷಣ

ಮುಂಬೈ: ನಗರದ ವಿಲೇ ಪಾರ್ಲೆ ಮನೆಯಿಂದ ಕಳೆದ 6 ದಿನಗಳ ಹಿಂದೆ ಕಾಣೆಯಾಗಿದ್ದ 17 ವರ್ಷದ ಕಾಲೇಜು ವಿದ್ಯಾರ್ಥಿನಿ ಅಮ್ಮನ ಮಡಿಲು ಸೇರಿದ ಕ್ಷಣದ ಭಾವನಾತ್ಮಕ ಫೋಟೋವನ್ನು ಮುಂಬೈ ಪೊಲೀಸರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿದ್ಯಾರ್ಥಿನಿಯನ್ನು ಸ್ವಾತಿ ಕಂಗೆ ಎಂದು ಗುರುತಿಸಲಾಗಿದೆ. ಈಕೆ ಅಂಧೇರಿ ಕಾಲೇಜೊಂದರಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದು, ಆಗಸ್ಟ್ 16ರಂದು ಕಾಲೇಜಿಗೆಂದು ಹೋದವಳು ಕಾಣೆಯಾಗಿದ್ದಳು. ಇದೀಗ ನಿನ್ನೆ ಪತ್ತೆಯಾಗಿದ್ದು, ಮಗಳಿಗಾಗಿ ಕಾಯುತ್ತಿದ್ದ ಪೋಷಕರ ಖುಷಿಯ ಕಣ್ಣೀರು ಮನಕಲಕುವಂತಿತ್ತು. ಈ ಫೋಟೋ ಮಗಳು ನಾಪತ್ತೆಯಾಗಿದ್ದಂದಿನಿಂದ ಕುಟುಂಬ ಎಷ್ಟು ಚಿಂತೆಗೀಡಾಗಿತ್ತೆಂದು ಸ್ಪಷ್ಟವಾಗಿ ತೋರಿಸುತ್ತಿದೆ.

ಮಗಳು ನಾಪತ್ತೆಯಾಗಿರುವ ಕುರಿತು ಸ್ವಾತಿ ಪೋಷಕರು ಅಂಧೇರಿ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 16ರಂದು ದೂರು ದಾಖಲಿಸಿದ್ದರು. ಅಂತೆಯೇ ಪೊಲೀಸರು ಸ್ವಾತಿಯ ಹುಡುಕಾಟಕ್ಕೆ 4 ತಂಡಗಳನ್ನು ರಚಿಸಿದ್ದರು. ಅಲ್ಲದೇ ಸುಮಾರು 7 ಸಿಸಿಟಿವಿ ಕ್ಯಾಮರಾಗಳನ್ನು ಪರಿಶಿಲಿಸಿದ್ದರು. ಅಲ್ಲದೇ ಆಕೆಯ ಸ್ನೇಹಿತರು ಸೇರಿದಂತೆ ಹಲವಾರು ಮಂದಿಯನ್ನು ತನಿಖೆ ಮಾಡಿದ್ದರು. ಅಂತೆಯೇ ಆಗಸ್ಟ್ 22ರಂದು ಬೆಳಗ್ಗಿನ ಜಾವ ಸುಮಾರು 4 ಗಂಟೆಯ ವೇಳೆಗೆ ಸ್ವಾತಿ ಥಾಣೆಯಲ್ಲಿರುವುದು ಬೆಳಕಿಗೆ ಬಂದಿದೆ ಅಂತ ಪೊಲಿಸರು ತಿಳಿಸಿದ್ದಾರೆ.

ಮಂಗಳವಾರ ಅಂಧೇರಿ ಪೊಲೀಸ್ ಠಾಣೆಯಿಂದ ಇಬ್ಬರು ಅಧಿಕಾರಿಗಳಾದ ಚೇತನ್ ಪಚೆಲ್ವರ್ ಹಾಗೂ ಚವಾನ್, ಸ್ವಾತಿ ಥಾಣೆಯಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಆಕೆಯನ್ನು ಅಂಧೆರಿಗೆ ಕರೆದುಕೊಂಡು ಬಂದಿದ್ದಾರೆ.

`ಅಂಧೇರಿ ಪೊಲೀಸರ ತಂಡದ ಸತತ ಪ್ರಯತ್ನದಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯ ಪತ್ತೆ ಮಾಡಲಾಗಿದೆ. ಪೊಲೀಸ್ ಠಾಣೆಯಲ್ಲಿ ವಿಚಾರಣೆಯ ಬಳಿಕ ವಿದ್ಯಾರ್ಥಿನಿಯನ್ನು ಪೋಷಕರಿಗೆ ಒಪ್ಪಿಸಲಾಗಿದೆ’ ಅಂತ ಅಂಧೇರಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಪಂಡಿತ್ ತೊರಟ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಆಕೆ ಪೋಷಕರ ಕೈಗೆ ಸೇರುವುದಕ್ಕೂ ಮುನ್ನ ಮಾಧ್ಯಮಕ್ಕೆ ಸ್ವಾತಿ ತಾಯಿ ಪ್ರತಿಕ್ರಿಯಿಸಿ, `ನನ್ನ ಮಗಳು ಅಂಧೇರಿ ಪೊಲೀಸ್ ಠಾಣೆಯಲ್ಲಿದ್ದಾಳೆ. ಇನ್ನೇನು ಕೆಲ ಹೊತ್ತಲ್ಲೇ ಆಕೆಗೆ ಮನೆಗೆ ಬರುತ್ತಾಳೆ. ಘಟನೆಯ ಬಗ್ಗೆ ನನಗೇನೂ ಗೊತ್ತಿಲ್ಲ. ತನ್ನ ಕೆಲ ಸಹಪಾಠಿಗಳ ಜೊತೆ ಆಕೆ ಹೊರಗಡೆ ಹೋಗಿರುವುದು ಅಷ್ಟೇ ಗೊತ್ತಿದೆ. ಒಟ್ಟಿನಲ್ಲಿ 6 ದಿನಗಳ ಬಳಿಕ ಸುರಕ್ಷಿತವಾಗಿ ಮನೆಗೆ ಬರುತ್ತಿರುವುದೇ ನನಗೆ ಸಂತಸ’ ಅಂತ ಹೇಳಿ ಖುಷಿಯ ಕಣ್ಣೀರು ಸುರಿಸಿದ್ದರು.

Comments

Leave a Reply

Your email address will not be published. Required fields are marked *