ಜಮ್ಮು ಕಾಶ್ಮೀರ ಪೊಲೀಸರ ದಾರುಣ ಹತ್ಯೆ ಬೆನ್ನಲ್ಲೇ ರಾಜೀನಾಮೆ ವೀಡಿಯೋ ಪೋಸ್ಟ್-ಫೇಕ್ ವೀಡಿಯೋ ಎಂದ ಕೇಂದ್ರ

ಶ್ರೀನಗರ: ಜಮ್ಮು ಕಾಶ್ಮೀರದ ಮೂವರು ಪೊಲೀಸರನ್ನು ಅಪರಹಣ ಮಾಡಿ ದಾರುಣವಾಗಿ ಕೊಲೆ ಮಾಡಿದ ಬೆನ್ನಲ್ಲೇ ಜಮ್ಮು ಕಾಶ್ಮೀರ ವಿಶೇಷ ಪೊಲೀಸ್  ಮೂವರು ಅಧಿಕಾರಿಗಳು ರಾಜೀನಾಮೆ ನೀಡಿದ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಆದರೆ ಈ ವೀಡಿಯೋಗಳು ನಕಲಿ ಎಂದು ಕೇಂದ್ರ ಗೃಹ ಇಲಾಖೆ ಸ್ಪಷ್ಟನೆ ನೀಡಿದೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಹಿಜ್ಬುಲ್ ಮುಜಹೀದ್ದೀನ್ ಉಗ್ರ ಸಂಘಟನೆ ಜಮ್ಮು ಕಾಶ್ಮೀರದ ವಿಶೇಷ ಪೊಲೀಸ್ ದಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಮ್ಮು ಕಾಶ್ಮೀರದ ನಿವಾಸಿಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು, ಇಲ್ಲವಾದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ವೀಡಿಯೋ ಬಿಡುಗಡೆ ಮಾಡಿತ್ತು.

ಉಗ್ರರ ಎಚ್ಚರಿಕೆ ಕೆಲವೇ ದಿನಗಳ ಅಂತರದಲ್ಲಿ ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಲು ಆರಂಭಿಸಿದ್ದರು. ಈ ನಡುವೆ ದಕ್ಷಿಣ ಕಾಶ್ಮೀರದ ವಿಶೇಷ ಪೊಲೀಸ್ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 3 ಪೊಲೀಸರ ಮನೆಗೆ ನುಗ್ಗಿ ಅಪರಹಣ ಮಾಡಿ ಬಳಿಕ ಅವರನ್ನು ಕೊಲೆ ಮಾಡಲಾಗಿತ್ತು. ಅಲ್ಲದೇ ಕೊಲೆ ಮಾಡುವ ವೇಳೆ ಭಾರತೀಯ ಸೈನ್ಯದ ಮಾಹಿತಿ ನೀಡುವಂತೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು.

ಈ ಘಟನೆಯ ಬಳಿಕ ಕಾಶ್ಮೀರದ ವಿಶೇಷ ಪೊಲೀಸ್ ದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ 3 ಅಧಿಕಾರಿಗಳು ತಾವು ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಾಗಿ ವೀಡಿಯೋ ಬಿಡುಗಡೆ ಮಾಡಿದ್ದಾರೆ. ಕಾಶ್ಮೀರದ ಕುಲಗಾಮ್ ನಿವಾಸಿಯಾದ ನವಾಜ್ ಅಹ್ಮದ್, ಶದಿರ್ ಅಹ್ಮದ್ ಸೇರಿದಂತೆ ಮತ್ತೊಬ್ಬ ಅಧಿಕಾರಿ ವೀಡಿಯೋದಲ್ಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ಇಬ್ಬರು ಅಧಿಕಾರಿಗಳು ತಾವು 6 ಮತ್ತು 8 ವರ್ಷ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದಾಗಿ ವೀಡಿಯೋದಲ್ಲಿ ತಿಳಿಸಿದ್ದಾರೆ.

ಹಿಜ್ಬುಲ್ ಮುಜಹಿದ್ದಿನ್ ಉಗ್ರರು ವಿಶೇಷ ಪೊಲೀಸ್ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಲು ಪ್ರಮುಖ ಕಾರಣವಿದ್ದು, ಇವರೇ ಜಮ್ಮು ಕಾಶ್ಮೀರದ ಸ್ಥಳೀಯ ಉಗ್ರರ ಬಗ್ಗೆ ಮಾಹಿತಿ ನೀಡುವ ಪ್ರಮುಖ ಮೂಲಗಳು ಎಂದು ತಿಳಿದಿದ್ದಾರೆ. ಅಲ್ಲದೇ ಉಗ್ರರು 4 ದಿನಗಳ ಒಳಗಡೆ ರಾಜೀನಾಮೆ ನೀಡಬೇಕು ಎಂದು ಡೆಡ್‍ಲೈನ್ ನೀಡಿದ್ದರು. ಈ ಕುರಿತ ಪೋಸ್ಟರ್ ಗಳನ್ನು ಜಮ್ಮು ಕಾಶ್ಮಿರದ ಹಲವು ಹಳ್ಳಿಗಳಲ್ಲಿ ಎಸೆದಿದ್ದರು ಎಂಬ ಮಾಹಿತಿ ಇದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *