ಸರ್ಕಾರಿ ಶಾಲೆಗೆ ಸೇರಿದ ಜಾಗಕ್ಕಾಗಿ ವಾಗ್ವಾದ- ಆಟವಾಡ್ತಿದ್ದ ಮಕ್ಳನ್ನೂ ಗದರಿಸಿದ!

ಮಂಡ್ಯ: ಸರ್ಕಾರಿ ಶಾಲೆಗೆ ಸೇರಿದ ಜಾಗ ನಮ್ಮದೆಂದು ಗ್ರಾಮದ ವ್ಯಕ್ತಿಯೊಬ್ಬರು ಶಿಕ್ಷಕರ ಜೊತೆ ವಾಗ್ವಾದ ನಡೆಸಿದ್ದಲ್ಲದೆ, ಶಾಲಾ ಮೈದಾನದಲ್ಲಿ ಆಟವಾಡುತ್ತಿರುವ ಮಕ್ಕಳನ್ನೂ ಗದರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಸಂತೆಬಾಚಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದೆ. ಗ್ರಾಮದ ಸರ್ವೆ ನಂಬರ್ 196ರಲ್ಲಿ ಸರ್ಕಾರಿ ಶಾಲೆಗೆ ಮೀಸಲಿರಿಸಿದ 98 ಗುಂಟೆ ಜಾಗವಿದೆ. 1950ನೇ ಇಸವಿಯಿಂದಲೂ ಈ ಜಾಗ ಶಾಲೆಯ ಒಡೆತನದಲ್ಲೇ ಇದೆ.

ಆದರೆ ಕಳೆದ ನಾಲ್ಕು ವರ್ಷಗಳಿಂದ ಗ್ರಾಮದ ಲಕ್ಷ್ಮಣ ಮತ್ತು ತಂಗ್ಯಮ್ಮ ಶಾಲೆಗೆ ಸೇರಿದ ಜಾಗ ನಮ್ಮದು ಎಂದು ದನಕರುಗಳನ್ನು ಕಟ್ಟುತ್ತಿದ್ದಾರೆ. ಜೊತೆಗೆ ಶಾಲಾ ಮೈದಾನದಲ್ಲಿ ಗಿಡ ನೆಡಲು ಹೋದರೆ ಅಥವಾ ಕ್ರೀಡಾಕೂಟ ನಡೆದರೆ ಅಡ್ಡಿಪಡಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಶಿಕ್ಷಕರ ಮೇಲೂ ಜೋರು ಧ್ವನಿಯಲ್ಲಿ ಗಲಾಟೆ ಮಾಡಿದ್ದಾರೆ. ಅಲ್ಲದೇ ಮೈದಾನದಲ್ಲಿ ಆಟವಾಡುತ್ತಿರುವ ಮಕ್ಕಳನ್ನೂ ಗದರಿದ್ದಾರೆ.

ಈ ಎಲ್ಲ ದೃಶ್ಯಗಳನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಜೊತೆಗೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲವೆಂದು ಶಿಕ್ಷಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅಲ್ಲದೇ ಈ ಕೂಡಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸರ್ಕಾರಿ ಶಾಲೆಗೆ ಸೇರಿದ ಜಾಗವನ್ನು ಅಳತೆ ಮಾಡಿಸಿ ಬಂದೋಬಸ್ತ್ ಮಾಡಬೇಕು. ಅನವಶ್ಯಕವಾಗಿ ಯಾವುದೇ ವ್ಯಕ್ತಿ ಸರ್ಕಾರಿ ಶಾಲೆಯ ಜಾಗವನ್ನು ಅತಿಕ್ರಮವಾಗಿ ಪ್ರವೇಶಿಸಬಾರದು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *