ಸ್ವಾತಂತ್ರ್ಯ ಸಿಕ್ಕಿ ವರ್ಷಗಳು ಕಳೆದರೂ ನೇತಾಜಿ ಕನಸ್ಸನ್ನು ನನಸು ಮಾಡಲು ಸಾಧ್ಯವಾಗಿಲ್ಲ: ಮೋದಿ

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕನಸಿನ ಸೇನೆಯನ್ನು ನಿರ್ಮಿಸಲು ನಾವು ಕಳೆದ 4 ವರ್ಷಗಳಿಂದ ಹಲವು ಕಾರ್ಯಗಳನ್ನು ಮಾಡಿದ್ದು, ಅವರ ಕನಸನ್ನು ನನಸು ಮಾಡುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಸುಭಾಷ್ ಚಂದ್ರ ಬೋಸ್ ಅವರ ಆಝಾದ್ ಹಿಂದ್ ಫೌಜ್ ಸ್ಥಾಪನೆ 75ನೇ ವರ್ಷದ ನೆನಪಿಗಾಗಿ ಇಂದು ಪ್ರಧಾನಿ ಮೋದಿ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದರು. ವಿಶೇಷವಾಗಿ ಕಾರ್ಯಕ್ರಮಕ್ಕೆ ಆಝಾದ್ ಹಿಂದ್ ಫೌಜ್ ಟೋಪಿಯನ್ನು ಧರಿಸಿ ಗಮನಸೆಳೆದರು.

ಈ ವೇಳೆ ಮಾತನಾಡಿದ ಅವರು, ನೇತಾಜಿ ತಮ್ಮ ಅವಧಿಯಲ್ಲಿ ಬದಲಾದ ಪರಿಸ್ಥಿತಿಗಳಿಗೆ ತಕ್ಕಂತೆ ಹೋರಾಟ ರೂಪಿಸಿ, ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಜನತೆಯನ್ನು ಒಗ್ಗೂಡಿಸಿದ್ದರು. ಅಲ್ಲದೇ ದೇಶದ ಸಂಸ್ಕೃತಿ ರಕ್ಷಣೆ, ಅಭಿವೃದ್ಧಿ ಬಗ್ಗೆ ಆಶ್ವಾಸನೆ ನೀಡಿದ್ದರು. ದೇಶದ ಸಾಂಪ್ರದಾಯಗಳ ಬಗ್ಗೆ ಹೆಮ್ಮೆ ಇರುವ ಎಲ್ಲಾ ರಂಗಗಳಲ್ಲಿಯೂ ಬೆಳವಣಿಗೆ ಸಾಧಿಸುವ ರಾಷ್ಟ್ರದ ಕಲ್ಪನೆ ಹೊಂದಿದ್ದರು. ಆದರೆ ಸ್ವಾತಂತ್ರ್ಯ ಬಂದು ಹಲವು ವರ್ಷಗಳು ಕಳೆದರೂ ನಾವು ಅವರ ಕನಸುಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಹಲವರ ತ್ಯಾಗ ಬಲಿದಾನದಿಂದ ನಾವು ಸ್ವರಾಜ್ಯವನ್ನ ಪಡೆದಿದ್ದು, ಅದನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ಅವರ ಕನಸು ಸಕಾರಗೊಳ್ಳುವಂತೆ ಮಾಡಲು 4 ವರ್ಷಗಳಲ್ಲಿ ಸತತವಾಗಿ ಪ್ರಯತ್ನಿಸುತ್ತಿದ್ದೇವೆ. ಅವರ ಕುರಿತ ಸಾಕಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿದ್ದೇವೆ. ಸರ್ಜಿಕಲ್ ಸ್ಟ್ರೈಕ್ ಮಾಡುವಂತಹ ದೃಢ ತೀರ್ಮಾನಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಇದೇ ವೇಳೆ ನೆಹರು ಕುಟುಂಬದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಮೋದಿ, ಪಟೇಲ್, ಅಂಬೇಡ್ಕರ್, ನೇತಾಜಿ ಅವರ ಕೊಡುಗೆಗಳನ್ನು ಜನರಿಂದ ದೂರ ಮಾಡಲು ಯತ್ನಿಸಿದ್ದರು. ಆದರೆ ಇಂದಿನ ಸರ್ಕಾರ ಇದನ್ನು ಬದಲಾಯಿಸಿದೆ. ಬೋಸರ ಕಲ್ಪನೆಯ ಸೇನೆಯನ್ನು ನಿರ್ಮಿಸುತ್ತಿದೆ. ಅವರ ಗೌರವಾರ್ಥ ಪ್ರಶಸ್ತಿಯನ್ನು ಸ್ಥಾಪಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಪ್ರಮುಖ ಸಚಿವರು, ಮುಖಂಡರು ಸೇರಿದಂತೆ ಗಣ್ಯರು ಭಾಗವಹಿಸಿದ್ದರು. ಕೇವಲ ಕೆಂಪು ಕೋಟೆ ಮಾತ್ರವಲ್ಲದೇ ದೇಶದ ವಿವಿಧೆಡೆ ನೇತಾಜಿ ಅವರ ಆಝಾದ್ ಹಿಂದ್ ಫೌಜ್ ಸರ್ಕಾರ ಸ್ಥಾಪನೆಯ ಸ್ಮರಣೆಯ ಕಾರ್ಯಕ್ರಮವನ್ನು ಬಿಜೆಪಿ ಏರ್ಪಡಿಸಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *