ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ – ಈಶ್ವರಪ್ಪ ವಿರುದ್ಧ ಎಫ್‍ಐಆರ್ ದಾಖಲು

ಉಡುಪಿ: ಲಾಡ್ಜ್ ನಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಉಡುಪಿ ನಗರ ಠಾಣೆಯಲ್ಲಿ ಮಧ್ಯರಾತ್ರಿ 2.20ರ ಸುಮಾರಿಗೆ ಎಫ್‍ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಎ-1 ಆರೋಪಿ ಸಚಿವ ಕೆ.ಎಸ್ ಈಶ್ವರಪ್ಪ, ಎ-2 ಈಶ್ವರಪ್ಪ ಆಪ್ತ ಬಸವರಾಜ್, ಎ-2 ಈಶ್ವರಪ್ಪ ಆಪ್ತ ರಮೇಶ್ ಆಗಿದ್ದು, ಇವರುಗಳ ವಿರುದ್ಧ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ರಡಿ ಎಫ್‍ಐಆರ್ ದಾಖಲು ಮಾಡಿಕೊಳ್ಳಲಾಗಿದೆ.

ಸಂತೋಷ್ ಆತ್ಮಹತ್ಯೆ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಈಶ್ವರಪ್ಪ ವಿರುದ್ಧ ಸಂತೋಷ್ ಸಹೋದರ ಪ್ರಶಾಂತ್ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಸಂತೋಷ್ ಸಾವಿಗೆ ಕಮಿಷನ್ ಕಾಟವೇ ಕಾರಣ ಎಂದು ಉಲ್ಲೇಖಿಸಿದ್ದಾರೆ. ಸಂತೋಷ್ ಅವರು ಹಿಂಡಲಗಾ ದೇವಿ ಜಾತ್ರೆ ಕಾಮಗಾರಿ ವಹಿಸಿಕೊಂಡಿದ್ದರು. ಕಾಮಗಾರಿಯ 4 ಕೋಟಿ ಬಿಲ್ ಮಂಜೂರು ಮಾಡಲು ಸಂತೋಷ್ ಕೇಳಿದ್ದರು. ಆದರೆ ಈ ಬಿಲ್ ಮಂಜೂರು ಮಾಡಲು 40% ಕಮಿಷನ್ ಬೇಡಿಕೆಯಿಟ್ಟಿದ್ದರು. ಇದೀಗ ಕಮಿಷನ್ ಆರೋಪಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಸಂತೋಷ್ ಸಹೋದರ ಉಲ್ಲೇಖಿಸಿದ್ದಾರೆ.

ಬಿಲ್ ಮಂಜೂರು ಮಾಡಲು 40% ಕಮಿಷನ್ ಕೇಳಿದ್ದಾಗಿ ದೂರು ನೀಡಿದ್ದು, ಈಶ್ವರಪ್ಪ, ಬಸವರಾಜ್, ರಮೇಶ್ ವಿರುದ್ಧ ಕ್ರಮಕ್ಕೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆಗೆ ಬಿಗಿಪಟ್ಟು- ಇಂದು ರಾಜ್ಯಪಾಲರಿಗೆ ಕಾಂಗ್ರೆಸ್ ದೂರು

ಇತ್ತ ರಾತ್ರಿಯೇ ಲಾಡ್ಜ್‍ಗೆ 8 ಮಂದಿ ಸಂತೋಷ್ ಕುಟುಂಬಸ್ಥರು ಆಗಮಿಸಿದ್ದರು. ಲಾಡ್ಜ್ ನ ಕೊಠಡಿ ಬಳಿ ತೆರಳಿ ಮೃತದೇಹ ವೀಕ್ಷಿಸಿದ್ದರು. ಎಫ್‍ಎಸ್‍ಎಲ್ ಟೀಂ ಕೂಡ ಉಡುಪಿ ಲಾಡ್ಜ್‍ಗೆ ಆಗಮಿಸಿದೆ. ವಿಧಿ ವಿಜ್ಞಾನ ತಜ್ಞರು 3 ಜೀಪ್‍ಗಳಲ್ಲಿ ಆಗಮಿಸಿದ್ದಾರೆ. 24 ಗಂಟೆಗೂ ಹೆಚ್ಚು ಕಾಲ ಲಾಡ್ಜ್‍ನಲ್ಲೇ ಮೃತದೇಹ ಇದ್ದು, ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲೇ ಸಂತೋಷ್ ಮೃತದೇಹವಿತ್ತು.

Comments

Leave a Reply

Your email address will not be published. Required fields are marked *