ಅಂಬೇಡ್ಕರ್ ಸಂವಿಧಾನ ಬರೆಯದಿದ್ದರೆ ಮನುಸ್ಮೃತಿಯ ಸಂವಿಧಾನ ಬರುತಿತ್ತು: ಸಿದ್ದರಾಮಯ್ಯ

ಬೆಂಗಳೂರು: ಅಂಬೇಡ್ಕರ್ ಅವರು ಸಂವಿಧಾನ ಬರೆಯದಿದ್ದರೆ ಮನುಸ್ಮೃತಿ ಸಂವಿಧಾನ ಬರುತಿತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಮಾಜಿ ಸಿಎಂ, ಕೊಳಕು ಮನಸ್ಸಿನ ವ್ಯಕ್ತಿಗಳು ಅಂಬೇಡ್ಕರ್ ಅವರು ದಲಿತರಿಗೆ ಮಾತ್ರ ಮೀಸಲಾತಿ ನೀಡಿದ್ದಾರೆ ಎಂದು ಆರೋಪಿಸುತ್ತಾರೆ. ಈಗಲೂ ಸಂವಿಧಾನವನ್ನು ವಿರೋಧಿಸುವವರು ಇದ್ದಾರೆ ಎಂದು ಕಿಡಿಕಾರಿದರು.

ಒಂದು ವೇಳೆ ಸಂವಿಧಾನ ಬದಲಾವಣೆ ಮಾಡಬೇಕು ಎಂದು ಹೇಳಿದರೆ ರಕ್ತಪಾತ ಆಗುತ್ತದೆ. ಸಂಸದ ಅನಂತ್‍ಕುಮಾರ್ ಹೆಗ್ಡೆ ಮಂತ್ರಿಯಾಗಿದ್ದ. ಅವನು ಸಂವಿಧಾನ ಬದಲಾವಣೆ ಮಾಡಬೇಕು ಎಂದು ಹೇಳಿಕೆ ನೀಡುತ್ತಾನೆ. ಇದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೊತ್ತಿಲ್ಲವೇ? ಅಥವಾ ಹಾಗೆ ಮಾತನಾಡುವಂತೆ ಮೋದಿ ಅವರೇ ಹೇಳಿಕೊಟ್ಟಿದ್ದರಾ? ಸಂವಿಧಾನ ಬದಲಾವಣೆ ಹೇಳಿಕೆ ಕೊಟ್ಟಿದ್ದಾರೆ ಅಂತ ತಿಳಿದ ಮೇಲೂ ಪ್ರಧಾನಿ ಮೋದಿಯವರು ಅವನ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಸಂವಿಧಾನ ಬದಲಾವಣೆ ಮಾಡಬೇಕು ಎನ್ನುವ ಅನಂತ್‍ಕುಮಾರ್ ಹೆಗ್ಡೆಗೆ ಮೋದಿಯವರು ಮಂತ್ರಿಗಿರಿ ಕೊಟ್ಟರು. ಎಲ್ಲ ರೀತಿಯ ಅವಕಾಶಗಳನ್ನು ನೀಡಿದರು. ಇದೇನಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕೊಡುವ ಗೌರವ ಎಂದು ಗುಡುಗಿದರು.

ಮೊದಲ ಬಾರಿಗೆ ಮೀಸಲಾತಿ ನೀಡಿದ್ದು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್. ಡಾ.ಅಂಬೇಡ್ಕರ್ ಸ್ಮರಣೆ ಜೊತೆಗೆ ಸಾಹು ಮಹಾರಾಜ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನೂ ಸ್ಮರಿಸಬೇಕು. ಮೀಸಲಾತಿಯಿಂದ ಹಲವು ಜನಾಂಗಕ್ಕೆ ಅನುಕೂಲವಾಗಿದೆ. ಡಾ.ಅಂಬೇಡ್ಕರ್ ಅವರು ದಲಿತರಿಗೆ ಮಾತ್ರ ಸೌಲಭ್ಯಗಳನ್ನು ಒದಗಿಸಲಿಲ್ಲ, ಎಲ್ಲರಿಗೂ ಸಿಗುವಂತೆ ಸಂವಿಧಾನ ರಚಿಸಿದ್ದಾರೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *