ನರಳಾಡುತ್ತಿದ್ದ ವ್ಯಕ್ತಿ – ರೈಲ್ವೇ ಹಳಿಯಲ್ಲಿ ಭುಜದ್ಮೇಲೆ ಹೊತ್ಕೊಂಡು 1.5 ಕಿ.ಮೀ ಹೋದ್ರು ಕಾನ್ ಸ್ಟೇಬಲ್

ಭೋಪಾಲ್: ಮಧ್ಯ ಪ್ರದೇಶದ ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು ಗಾಯಗೊಂಡ ವ್ಯಕ್ತಿಯನ್ನು ಅವರ ಹೆಗಲ ಮೇಲೆ ಹೊತ್ತುಕೊಂಡು ರೈಲ್ವೇ ಹಳಿಯ ಮೇಲೆ ಓಡಿ ಹೋಗಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕಾನ್ ಸ್ಟೇಬಲ್ ಪೂನಮ್ ಬಿಲ್ಲೋರ್ ಅವರು ಗಾಯಗೊಂಡಿದ್ದ ಅಜಿತ್ ಎಂಬವರನ್ನು ಹೋಶಂಗಾಬಾದ್‍ನಲ್ಲಿ ತಮ್ಮ ಭುಜದ ಮೇಲೆ ಹೊತ್ತು ರೈಲ್ವೇ ಹಳಿಯ ಮೇಲೆ ಒಂದೂವರೆ ಕಿ.ಮೀ ವರೆಗೂ ಓಡಿದ್ದಾರೆ. ಅಜಿತ್ ಚಲಿಸುವ ರೈಲಿನಿಂದ ಬಿದ್ದು ಗಾಯಗೊಂಡಿದ್ದರು. ಆದರೆ ಅಪಘಾತ ನಡೆದ ಸ್ಥಳದ ಸಮೀಪದಲ್ಲಿ ಯಾವುದೇ ವಾಹನ, ಅಂಬ್ಯುಲೆನ್ಸ್ ಅಥವಾ ಪೊಲೀಸ್ ವಾಹನವು ಇರಲಿಲ್ಲ. ಹೀಗಾಗಿ ಕಾನ್ ಸ್ಟೇಬಲ್ ನಿಲ್ಲೋರ್ ಅವರೇ ಭುಜದ ಮೇಲೆ ಹೊತ್ತಕೊಂಡು ಹೋಗಿದ್ದಾರೆ.

ಅಜಿತ್ ಉತ್ತರ ಪ್ರದೇಶದ ಭದೋಹಿ ನಿವಾಸಿಯಾಗಿದ್ದು, ಮುಂಬೈಗೆ ಪ್ರಯಾಣಿಸುತ್ತಿದ್ದರು. ಆದರೆ ಶನಿವಾರ ಬೆಳಗ್ಗೆ ಪಗ್ಧಾಲ್ ರೈಲು ನಿಲ್ದಾಣದ ಸಮೀಪವಿರುವ ರಾವನ್ ಪೇಪಾಲ್ ಗ್ರಾಮದಲ್ಲಿ ಆಕಸ್ಮಿಕವಾಗಿ ರೈಲಿನಿಂದ ಬಿದ್ದಿದ್ದಾರೆ ಎಂದು ಶಿವಾಲ್ ಪೊಲೀಸ್ ಠಾಣೆಯಲ್ಲಿ ಉಸ್ತುವಾರಿ ಸುನಿಲ್ ಪಟೇಲ್ ತಿಳಿಸಿದ್ದಾರೆ.

“ವ್ಯಕ್ತಿ ಬಿದ್ದಿದ್ದ ಸ್ಥಳ ರೈಲ್ವೆ ಗೇಟಿನಿಂದ ಸುಮಾರು 2 ಕಿ.ಮೀ ದೂರದಲ್ಲಿತ್ತು. ಅಲ್ಲಿಗೆ ಆಂಬ್ಯುಲೆನ್ಸ್ ಬರಲಾಗಲಿಲ್ಲ. ಹೀಗಾಗಿ ನಾನೇ ಕಾಲ್ನಡಿಗೆಯಿಂದ ಅಲ್ಲಿಗೆ ಹೋಗಿದ್ದೆ. ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು ಒದ್ದಾಡುತ್ತಿದ್ದರು. ಆ ಸಮಯದಲ್ಲಿ ನಾನು ಅವರ ಜೀವವನ್ನು ಉಳಿಸಬೇಕಾಗಿತ್ತು. ಕೊನೆಗೆ ಭುಜದ ಮೇಲೆ ಎತ್ತುಕೊಂಡು 1.5 ಕಿ.ಮೀ ದೂರದ ವರೆಗೂ ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದ್ದೇನೆ” ಎಂದು ಬಿಲ್ಲೋರ್ ತಿಳಿಸಿದ್ದಾರೆ.

ಕಾನ್ ಸ್ಟೇಬಲ್ ಪೂನಮ್ ಬಿಲ್ಲೋರ್ ಅವರು ಸರಿಯಾದ ಸಮಯಕ್ಕೆ ಗಾಯಗೊಂಡಿದ್ದ ಪ್ರಯಾಣಿಕನ ಜೀವವನ್ನು ಉಳಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಕಾನ್ ಸ್ಟೇಬಲ್ ಗಾಯಗೊಂಡಿದ್ದ ವ್ಯಕ್ತಿಯನ್ನು ಹೊತ್ತುಕೊಂಡು ಬಂದಂತಹ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *