ಕೊನೆ ಕ್ಷಣದಲ್ಲಿ ಡಿಜಿಪಿ ಪ್ರಮೋಷನ್‌ಗೆ ತಡೆ – ಅಲೋಕ್ ಕುಮಾರ್‌ಗೆ ಇಲಾಖೆಯಲ್ಲೇ ಪಿತೂರಿ?

ಬೆಂಗಳೂರು: 31 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್‌ (Alok Kumar) ಅವರಿಗೆ ಪೊಲೀಸ್ ಇಲಾಖೆಯೇ (Police Department) ಬೆನ್ನಿಗೆ ಚೂರಿ‌ ಇರಿದ ಆರೋಪ ಕೇಳಿಬಂದಿದೆ.

ಹೌದು. ಬುಧವಾರದಿಂದ ಎಡಿಜಿಪಿ ಹುದ್ದೆಯಿಂದ ಡಿಜಿಪಿಯಾಗಿ ಅಲೋಕ್‌ ಕುಮಾರ್‌ ಬಡ್ತಿ ಪಡೆಯಬೇಕಿತ್ತು. ಆದರೆ ಕುಮಾರಸ್ವಾಮಿ (Kumaraswamy) ಮುಖ್ಯಮಂತ್ರಿ ಅವಧಿಯಲ್ಲಿ ನಡೆದಿದೆ ಎನ್ನಲಾದ 5 ವರ್ಷದ ಹಳೆ ಫೋನ್ ಟ್ಯಾಪಿಂಗ್ ಪ್ರಕರಣದ (Phone Tapping) ಬಗ್ಗೆ ಸರ್ಕಾರ ಇಲಾಖಾ ತನಿಖೆಗೆ ಆದೇಶ ನೀಡಿ ಬಡ್ತಿಯನ್ನು ತಡೆ ಹಿಡಿದಿದೆ.

ಈ ತಿಂಗಳ 5 ರಂದು ಪ್ರಕರಣ ಇತ್ಯರ್ಥವಾಗಿದೆ ಎಂದು ಸರ್ಕಾರ ಆರ್‌ಟಿಐನಲ್ಲಿ ಉತ್ತರ ನೀಡಿದೆ. ಆದರೆ ಮೇ 9 ರಂದು ಇಲಾಖಾ ತನಿಖೆಗೆ ಆದೇಶಿಸಿ ನೋಟಿಸ್‌ ನೀಡಲಾಗಿದೆ. ಈ ನೋಟಿಸ್‌ ಮೇಲೂ ಅಲೋಕ್‌ ಕುಮಾರ್ ಅವರು ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯಿಂದ (CAT) ತಡೆಯಾಜ್ಞೆ ತಂದಿದ್ದು ಮುಂದಿನ ವಿಚಾರಣೆಯನ್ನು ಜೂನ್ 10 ಕ್ಕೆ ಮುಂದೂಡಿಕೆ ಮಾಡಲಾಗಿದೆ.  ಇದನ್ನೂ ಓದಿ: ಎಡಿಜಿಪಿ ಅಲೋಕ್‌ ಕುಮಾರ್‌ಗೆ ಮುಂಬಡ್ತಿ ನೀಡದೇ 6 ವರ್ಷದ ಹಳೆ ಕೇಸ್‌ ಕೆದಕಿದ ಸರ್ಕಾರ

ಬೆಂಗಳೂರು ನಗರ ಪೊಲೀಸ್‌ ಆಯುಕ್ತ ದಯಾನಂದ್

ಅಧಿಕಾರಿಗಳೇ ಅಡ್ಡಿ?
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕುರ್ಚಿ ಮೇಲೆ ಕೆಲ ಎಡಿಜಿಪಿಗಳು ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. ಅಲೋಕ್‌ ಕುಮಾರ್‌ಗೆ ಈಗ ಪ್ರಮೋಷನ್ ನೀಡಿದರೆ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿ–ಐಜಿಪಿ)ಹೊಸದಾಗಿ ಅಧಿಕಾರ ಸ್ವೀಕರಿಸಿದ ಸಲೀಂ ಅವರ ನಂತರ ಡಿಜಿ ಅಂಡ್ ಐಜಿಪಿ ರೇಸ್‌ನಲ್ಲಿ ಇವರ ಹೆಸರು ಬರುತ್ತದೆ. ಈ ಹುದ್ದೆಯನ್ನು ತಪ್ಪಿಸಲು ಹುನ್ನಾರ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಅಲೋಕ್‌ ಕುಮಾರ್‌ ಬಗ್ಗೆ ಇಲ್ಲಸಲ್ಲದ ವಿಚಾರ ಹೇಳಿ ಬಡ್ತಿಯನ್ನು ತಡೆ ಹಿಡಿದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.

ಸದ್ಯ ದಯಾನಂದ್‌ ಅವರು ನಗರ ಪೊಲೀಸ್‌ ಆಯುಕ್ತರಾಗಿದ್ದಾರೆ. ಇವರಿಗೆ ಡಿಜಿಪಿಯಾಗಿ ಬಡ್ತಿ ನೀಡಿದರೆ ಅವರನ್ನು ಆ ಪಟ್ಟದಿಂದ ಇಳಿಸಬೇಕಾಗುತ್ತದೆ. ದಯಾನಂದ್‌ ಪಟ್ಟದಿಂದ ಇಳಿದರೆ ತಮಗೆ ಆಯುಕ್ತರ ಹುದ್ದೆ ಸಿಗಬಹುದು ಎಂಬ ಲೆಕ್ಕಾಚಾರವನ್ನು ಕೆಲವರು ಹಾಕಿದ್ದಾರೆ ಎಂಬ ಮಾತುಗಳು ಪೊಲೀಸ್‌ ವಲಯದಿಂದ ಕೇಳಿ ಬಂದಿದೆ. ಇದನ್ನೂ ಓದಿ: Exclusive: ಕಾಮಿಡಿ ಕಿಲಾಡಿ ಸ್ಟಾರ್‌, ನಟ ಮಡೆನೂರು ಮನು ವಿರುದ್ಧ ರೇಪ್‌ ಕೇಸ್‌

ಈ ಹಿಂದೆ ಅಲೋಕ್‌ ಕುಮಾರ್‌ ಕೇವಲ 45 ದಿನಗಳ ಕಾಲ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿದ್ದರು. ನಂತರ ಹುದ್ದೆಯನ್ನು ಕಿತ್ತುಕೊಳ್ಳಲಾಗಿತ್ತು. ಈಗ ಡಿಜಿಪಿ ಪ್ರೊಮೋಷನ್ ಸಹ ಕಸಿಯಲಾಗಿದ್ದು, ಅನ್ಯಾಯದ ವಿರುದ್ಧ ಮುಖ್ಯ ಕಾರ್ಯದರ್ಶಿಗಳಿಗೆ ಅಲೋಕ್ ಕುಮಾರ್ ಪತ್ರ ಬರೆದಿದ್ದಾರೆ.