2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 300 ಸೀಟ್‌ಗಳನ್ನು ಗೆಲ್ಲುವುದಿಲ್ಲ: ಗುಲಾಮ್ ನಬಿ ಆಜಾದ್

ಶ್ರೀನಗರ: 2024ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ 300 ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಸ್ವ-ಪಕ್ಷದ ಬಗ್ಗೆಯೇ ಖುಣಾತ್ಮಕವಾಗಿ ಮಾತನಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ರ‍್ಯಾಲಿ ವೇಳೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದತಿ ಕುರಿತು ಮಾತನಾಡಿದ ಅವರು, ರದ್ದಾದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸಲು ಸುಪ್ರೀಂ ಕೋರ್ಟ್‌ನಿಂದ ಸಾಧ್ಯವಿದೆ. ಇಲ್ಲವಾದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ 300 ಸ್ಥಾನಗಳನ್ನು ಗೆಲ್ಲಬೇಕಾಗುತ್ತದೆ. ಆದರೆ ಕಾಂಗ್ರೆಸ್‌ ಪಕ್ಷ ಅಷ್ಟು ಸ್ಥಾನಗಳನ್ನು ಗೆಲ್ಲುವುದು ಅಸಾಧ್ಯವಾಗಿದೆ. ಕಾಂಗ್ರೆಸ್‌ ಹೆಚ್ಚಿನ ಸೀಟ್‌ಗಳನ್ನು ಗೆಲ್ಲಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.

ಆರ್ಟಿಕಲ್ 370 ಅನ್ನು ಮತ್ತೆ ತರುವುದು ಸುಲಭದ ಮಾತಲ್ಲ. ಈ ಕುರಿತು ಭರವಸೆಗಳನ್ನು ನೀಡುವ ಸ್ಥಿತಿಯಲ್ಲಿ ನಾವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಮುಂದಿನ ಆದೇಶದವರೆಗೆ ದೆಹಲಿಯ ಎಲ್ಲಾ ಶಾಲೆಗಳನ್ನು ಮುಚ್ಚಲಾಗುವುದು: ಗೋಪಾಲ್ ರೈ

ಕೇವಲ ಜನರನ್ನು ಮೆಚ್ಚಿಸಲು ನಮ್ಮ ಕೈಯಲ್ಲಿ ಆಗದೇ ಇರುವುದರ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ನಿಮಗೆ ಸುಳ್ಳು ಭರವಸೆ ನೀಡಲು ಸಾಧ್ಯವಿಲ್ಲ. ನ್ಯಾಯಾಲಯದ ಹೊರತಾಗಿ ನಾವು ಈ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಅದೂ ಅಲ್ಲದೇ ನಮ್ಮಲ್ಲಿ 300 ಸಂಸದರ ಕೊರತೆ ಇದೆ. 2024ರಲ್ಲಿ ಕಾಂಗ್ರೆಸ್ 300 ಸಂಸದರನ್ನು ಗೆಲ್ಲುತ್ತದೆ ಎಂದು ನಾನು ಹೇಳಲಾರೆ. ದೇವರ ಇಚ್ಛೆ ಇದ್ದಾರೆ ನಾವು ಗೆಲ್ಲುತ್ತೇವೆ. ಆದರೆ ಈಗ ನಾನು ಆ ಕುರಿತು ಯಾವುದೇ ರೀತಿಯ ಸುಳ್ಳು ಭರವಸೆಗಳನ್ನು ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಆಜಾದ್ ಅವರು ಜಿ-23 ಅಥವಾ 23 ಕಾಂಗ್ರೆಸ್ ನಾಯಕರ ಗುಂಪಿನ ಪ್ರಮುಖ ಧ್ವನಿಯಾಗಿದ್ದಾರೆ. ಕಳೆದ ವರ್ಷ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು, ಸಂಸ್ಥೆಯಲ್ಲಿ ವ್ಯಾಪಕ ಬದಲಾವಣೆಗಳ ಬಗ್ಗೆ ಹೇಳಿದ್ದರು. ಜೊತೆಗೆ ನಾಯಕತ್ವದ ಬದಲಾವಣೆ ಬಗ್ಗೆಯೂ ಮಾತನಾಡಿ ಗಮನಸೆಳೆದಿದ್ದರು.

Comments

Leave a Reply

Your email address will not be published. Required fields are marked *