ಕುಂದಗೋಳದಲ್ಲಿ ‘ಕೈ’ಗೆ ಬಂಡಾಯದ ಬಿಸಿ

– ಕುಸುಮಾ ಶಿವಳ್ಳಿಗೆ ಟಿಕೆಟ್ ನೀಡಿದ್ದಕ್ಕೆ ಭಾರೀ ವಿರೋಧ
– ನಡು ರಸ್ತೆಯಲ್ಲಿಯೇ ಸಚಿವರ ಕಾರು ನಿಲ್ಲಿಸಿ ಆಕ್ರೋಶ

ಹುಬ್ಬಳ್ಳಿ: ಸಿ.ಎಸ್.ಶಿವಳ್ಳಿ ಅವರ ಪತ್ನಿಗೆ ಕುಂದಗೋಳ ಉಪಚುನಾವಣೆಯ ಟಿಕೆಟ್ ನೀಡಿದಕ್ಕೆ ಸಚಿವ ಸತೀಶ್ ಜಾರಕಿಹೊಳಿ ಎದುರಲ್ಲೆ ಕೈ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಕುಂದಗೋಳದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಬಂಡಾಯ ಎದ್ದಿದ್ದರು. ಹೀಗಾಗಿ ಬಂಡಾಯ ಶಮನ ಮಾಡಲು ಸಚಿವ ಸತೀಶ್ ಜಾರಕಿಹೊಳಿ ಅವರು ಕುಂದಗೋಳಕ್ಕೆ ಭೇಟಿ ನೀಡಿ, ಹಿಂದುಳಿದ ವರ್ಗಗಳ ನಾಯಕರ ಸಭೆ ನಡೆಸಿದರು. ಈ ವೇಳೆ ಸಚಿವರ ಎದುರೇ ಟಿಕೆಟ್ ಆಕಾಂಕ್ಷಿ ಶಿವಾನಂದ್ ಬೆಂತೂರು ಅಭಿಮಾನಿಗಳು ಪ್ರತಿಭಟನೆ ನಡೆಸಿದರು.

ಸಭೆಯಲ್ಲಿ ಅಸಮಾಧಾನ ಹೊರ ಹಾಕಿದ ಸ್ಥಳೀಯ ಕಾಂಗ್ರೆಸ್ ಮುಖಂಡ ಶಿವಾನಂದ್ ಬೆಂತೂರ್ ಅವರು, ಕಾಂಗ್ರೆಸ್ ಹೈಕಮಾಂಡ್ ಏಕಪಕ್ಷಿಯ ನಿರ್ಧಾರ ತೆಗದುಕೊಂಡಿದೆ. ಈ ಆಯ್ಕೆಯು ನಮಗೆ ನೋವು ತಂದಿದೆ. ಕುಂದಗೋಳದಲ್ಲಿ ಕಾಂಗ್ರೆಸ್ ಶಿವಳ್ಳಿ ಅವರದ್ದೇ ಎಂಬಂತಾಗಿದೆ. ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಳೆ ನಾಮಪತ್ರ ಸಲ್ಲಿಸುತ್ತೇನೆ. ಇಲ್ಲವೇ ನಾಲ್ಕೈದು ಜನ ಆಕಾಂಕ್ಷಿಗಳ ಜೊತೆ ಚರ್ಚಿಸಿ ಒಬ್ಬರು ಬಂಡಾಯ ಅಭ್ಯರ್ಥಿಯಾಗುತ್ತೇವೆ ಎಂದು ಹೇಳಿದರು.

ಅತೃಪ್ತರ ಸಭೆಯ ಬಳಿಕ ಮಾತನಾಡಿ ಸಚಿವರು, ಬಹಳ ಜನ ಆಕಾಂಕ್ಷಿಗಳಿದ್ದಾಗ ಈ ರೀತಿ ಆಗುವುದು ಸಹಜ. ನಾನು ಅವರ ಜೊತೆ ಮಾತನಾಡಿದ್ದೇನೆ. ಪಕ್ಷದ ವರಿಷ್ಠರು ನಾಳೆ ನಾಮಪತ್ರ ಸಲ್ಲಿಸಲು ಬರುತ್ತಾರೆ. ಅವರ ಗಮನಕ್ಕೆ ತರುತ್ತೇನೆ. ಪಕ್ಷದಲ್ಲಿ ಬಂಡಾಯವಿಲ್ಲ. ಈ ರೀತಿ ಅಸಮಾಧಾನ ಸಹಜ ಎಂದು ಹೇಳಿದರು.

ಕುಂದಗೋಳದಿಂದ ಹುಬ್ಬಳ್ಳಿಗೆ ಸಚಿವ ಸತೀಶ್ ಜಾರಕಿಹೊಳಿ ಮರಳುತ್ತಿದ್ದಾಗ, ನಡು ರಸ್ತೆ ಅವರ ಕಾರು ನಿಲ್ಲಿಸಿ ಆಕ್ರೋಶ ಹೊರ ಹಾಕಿದರು. ಈ ವೇಳೆ ಮನವೊಲಿಕೆಗೆ ಮುಂದಾದ ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೆ ಶಿವಾನಂದ ಬೆಂತೂರು, ಬೆಂಬಲಿಗರೂ ಕ್ಯಾರೆ ಎನ್ನಲಿಲ್ಲ. ಸ್ಥಳೀಯ ಮುಖಂಡರ ಅಭಿಪ್ರಾಯ ಕೇಳದೇ ಟಿಕೆಟ್ ನೀಡಿದ್ದು ಖಂಡನೀಯ ಎಂದು ಗುಡುಗಿದರು.

Comments

Leave a Reply

Your email address will not be published. Required fields are marked *