ಶಾಸಕ ಗಣೇಶ್ ಅಮಾನತು ವಾಪಸ್ – ಪಕ್ಷದಲ್ಲೇ ಉಳಿಸಿಕೊಳ್ಳಲು ಕೈ ನಾಯಕರ ಹೊಸತಂತ್ರ

ಬಳ್ಳಾರಿ: ಬಿಡದಿಯ ಈಗಲ್ಟನ್ ರೆಸಾರ್ಟಿನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಎದುರಿಸುತ್ತಿರುವ ಕಂಪ್ಲಿ ಶಾಸಕ ಗಣೇಶ್ ಮೇಲಿನ ಅಮಾನತನ್ನು ಕಾಂಗ್ರೆಸ್ ಹಿಂಪಡೆದಿದೆ.

ಕುಡಿದ ಮತ್ತಿನಲ್ಲಿ ನಡೆದ ಗಲಾಟೆಯಲ್ಲಿ ಹೊಸಪೇಟೆ ಶಾಸಕ ಆನಂದ್ ಸಿಂಗ್ ಮೇಲೆ ಗಣೇಶ್ ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ವೇಳೆ ಪಕ್ಷದ ಮೇಲಿನ ಒತ್ತಡ ಹಾಗೂ ಸಮ್ಮಿಶ್ರ ಸರ್ಕಾರಕ್ಕೆ ಉಂಟಾಗಬಹುದಾದ ಡ್ಯಾಮೆಜ್ ಕಂಟ್ರೋಲ್ ಮಾಡಲು ಜನವರಿ 1 ರಂದು ಕೆಪಿಸಿಸಿ ಶಾಸಕ ಜೆ ಎನ್ ಗಣೇಶರನ್ನ ಪಕ್ಷದಿಂದ ಅಮಾನತು ಮಾಡಿತ್ತು.

ಇತ್ತ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿರುವ ಶಾಸಕ ಗಣೇಶ್ ಮತ್ತೆ ಪಕ್ಷದ ಪರ ಬ್ಯಾಟ್ ಬೀಸಿ ಆಪರೇಷನ್ ಕಮಲಕ್ಕೆ ಒಳಗಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೇ ಆಂತರಿಕವಾಗಿ ಪ್ರಕರಣನ್ನು ಇತ್ಯರ್ಥ ಮಾಡಿಕೊಳ್ಳುವ ಬಗ್ಗೆ ಒಲವು ವ್ಯಕ್ತಪಡಿಸಿದ್ದರು. ಸದ್ಯ ಇದರ ಬೆನ್ನಲ್ಲೇ ಶಾಸಕರ ಅಮಾನತನ್ನು ವಾಪಸ್ ಪಡೆಯಲಾಗಿದೆ.

ಗಲಾಟೆ ಪ್ರಕರಣದ ಬಗ್ಗೆ ಡಿಸಿಎಂ ಪರಮೇಶ್ವರ್, ಸಚಿವರಾದ ಕೃಷ್ಣಬೈರೇಗೌಡ ಹಾಗೂ ಕೆಜೆ ಜಾರ್ಜ್ ಅವರ ಸಮಿತಿ ನೀಡಿದ ವರದಿ ಆಧರಿಸಿ ಕಂಪ್ಲಿ ಶಾಸಕ ಗಣೇಶರ ಅಮಾನತು ವಾಪಸ್ ಪಡೆಯಲಿದೆ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ. ಅಮಾನತು ವಾಪಸು ಪಡೆದಿರುವ ಬಗ್ಗೆ ಕೆಪಿಸಿಸಿ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.

ಕೆಲ ದಿನಗಳ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಶಾಸಕ ಗಣೇಶ್, ನಾನು ಬಿಜೆಪಿಗೆ ಹೋಗಲ್ಲ. ಯಾವ ಶಾಸಕರು ಸಹ ಪದೇ ಪದೇ ಚುನಾವಣೆಗೆ ಹೋಗಲು ಸಿದ್ಧರಿಲ್ಲ. ರಾಜ್ಯದಲ್ಲಿ ಸಮಿಶ್ರ ಸರ್ಕಾರ ಸುಭದ್ರವಾಗಿದೆ. ರಮೇಶ್ ಜಾರಕಿಹೊಳಿ ನಮ್ಮ ಸಮಾಜದ ನಾಯಕರು. ಅವರನ್ನ ಸಮಾಧಾನಪಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ರಮೇಶ್ ಜಾರಕಿಹೊಳಿಗೆ ಸರ್ಕಾರದಲ್ಲಿ ಉತ್ತಮ ಸ್ಥಾನಮಾನ ನೀಡಬೇಕು ಎಂದಿದ್ದರು.

ಪಕ್ಷ ಅಮಾನತು ಆದೇಶ ವಾಪಸ್ ಪಡೆಯುತ್ತಿದಂತೆ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ನಾನು ಆನಂದ್ ಸಿಂಗ್ ಒಳ್ಳೆಯ ಸ್ನೇಹಿತರು. ನನ್ನ ಅಮಾನತನ್ನು ಪಕ್ಷ ವಾಪಸ್ ಪಡೆದಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ಇತ್ತ ಲೋಕಸಭಾ ಚುನಾವಣೆಯಲ್ಲಿ ಸೋಲುಂಡ ಬಳಿಕ ಮೈತ್ರಿ ಪಕ್ಷಗಳ ನಾಯಕರು ಆಪರೇಷನ್ ಕಮಲ ಹಿನ್ನೆಲೆಯಲ್ಲಿ ಬಂಡಾಯ ಶಾಸಕರನ್ನು ಮನವೊಲಿಸುವ ಕಾರ್ಯದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಶಾಸಕ ಗಣೇಶ ಅಮಾನತನ್ನು ವಾಪಸ್ ಪಡೆಯಲಾಗಿದೆ.

Comments

Leave a Reply

Your email address will not be published. Required fields are marked *