ಪಕ್ಷಾತೀತವಾಗಿ ಹಿರಿಯರಿಗೆ ಗೌರವ ನೀಡೋ ವ್ಯಕ್ತಿತ್ವದವರಾಗಿದ್ದರು- ಸುಷ್ಮಾ ನಿಧನಕ್ಕೆ ಖರ್ಗೆ ಸಂತಾಪ

ಬೆಂಗಳೂರು: ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿಧನಕ್ಕೆ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ನಾನು ಕೇಂದ್ರದಲ್ಲಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್ ವಿರೋಧ ಪಕ್ಷದ ನಾಯಕಿಯಾಗಿದ್ದರು. ಆದರೆ ಯಾವಾಗಲೂ ಗೌರವದಿಂದ ನನ್ನನ್ನು ಮಾತಾಡಿಸುತ್ತಿದ್ದರು. ಪಕ್ಷ, ಪಂಗಡ ಮರೆತು ಪಕ್ಷಾತೀತವಾಗಿ ಹಿರಿಯರಿಗೆ ಗೌರವ ನೀಡುವ ವ್ಯಕ್ತಿತ್ವ ಅವರದ್ದಾಗಿತ್ತು ಎಂದರು.

ನನಗೆ ಸುಷ್ಮಾ ಅವರ ಪರಿಚಯ ಸುಮಾರು ವರ್ಷಗಳಿಂದಲೇ ಇತ್ತು. ಅವರು ಹರಿಯಾಣದಲ್ಲಿ ಅತ್ಯಂತ ಕಿರಿಯ ವಯಸ್ಸಿನ ಮಂತ್ರಿಯಾಗಿ ರಾಜಕೀಯ ಜೀವನ ಪ್ರಾರಂಭಿಸಿದ್ದರು. ಒಳ್ಳೆಯ ವಕ್ತಾರರಾಗಿದ್ದರು. ವಕೀಲೆಯಾಗಿ, ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದರು. ಒಳ್ಳೆಯ ಭಾಷಣಕಾರರು ಕೂಡ ಆಗಿದ್ದರು. ಸುಮಾರು 25 ವರ್ಷದಿಂದ ಅವರನ್ನು ಸಮೀಪದಿಂದ ಕಂಡಿದ್ದೇನೆ ಎಂದು ಸುಷ್ಮಾ ಅವರೊಂದಿಗಿದ್ದ ಒಡನಾಟವನ್ನು ಖರ್ಗೆ ಮೆಲುಕು ಹಾಕಿಕೊಂಡರು.

ಅವರಿಗೆ ಬಹಳ ದಿನದಿಂದ ಆರೋಗ್ಯ ಸರಿಯಿರಲಿಲ್ಲ. ಸದನದ ಒಳಗೆ ಭೇಟಿಯಾದಾಗ ಅವರು ನಿಜವಾಗಲೂ ಗುಡ್ ಹ್ಯೂಮನ್ ಬೀಂಗ್. ತನ್ನ ವಾಕ್ ಚಾತುರ್ಯದಿಂದ ಜನರ ಮನಸ್ಸು ಗೆದ್ದ ನಾಯಕಿ ನಮ್ಮನ್ನು ಅಗಲಿ ಹೋಗಿದ್ದಾಳೆ. ಅವರದ್ದು ದೊಡ್ಡ ವಯಸ್ಸೇನಿರಲಿಲ್ಲ. ನಮಗಿಂತ 10 ವರ್ಷ ಚಿಕ್ಕ ವಯಸ್ಸಿನವರು. ಇಷ್ಟು ಬೇಗ ಬಿಟ್ಟು ಹೋಗುತ್ತಾರೆ ಎಂದು ಗೊತ್ತಿರಲಿಲ್ಲ. ಅವರಿಗೆ ನನ್ನ ಸಂತಾಪ ವ್ಯಕ್ತಪಡಿಸುತ್ತೇನೆ ಎಂದರು.

ಮಂಗಳವಾರ ರಾತ್ರಿ ಹೃದಯಾಘಾತದಿಂದ ವಿಧಿವಶರಾಗಿರುವ ಸುಷ್ಮಾ ಸ್ವರಾಜ್(67) ಅವರ ಪಾರ್ಥಿವ ಶರೀರವನ್ನು ಜನಪತ್ ರಸ್ತೆಯ ಧವನ್ ದೀಪ್ ಕಟ್ಟಡದ ನಿವಾಸದಲ್ಲಿ ಇರಿಸಲಾಗಿದೆ. ಇಂದು ಜಂತರ್ ಮಂತರ್‍ನಲ್ಲಿ ನಂತರ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಧ್ಯಾಹ್ನ 2:30ರ ವರೆಗೆ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು. ಆ ಬಳಿಕ 3 ಗಂಟೆಗೆ ಲೋಧಿ ರಸ್ತೆಯ ಶವಾಗಾರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಸುಷ್ಮಾ ಅವರ ನಿಧನಕ್ಕೆ ದೇಶಾದ್ಯಂತ ಕಂಬನಿ ಮಿಡಿಯಲಾಗುತ್ತಿದೆ.

Comments

Leave a Reply

Your email address will not be published. Required fields are marked *