ಗೋವಾ ರಾಜಕಾರಣದಲ್ಲಿ ಚಮತ್ಕಾರ-ಎಲ್ಲದರಿಂದ ಹೊರ ಬಂದ ಕಾಂಗ್ರೆಸ್

ಪಣಜಿ: ರಾಜಕೀಯದಲ್ಲಿ ಏನು ಬೇಕಾದರೂ ಎಂಬುದಕ್ಕೆ ತಾಜಾ ಉದಾಹರಣೆ ಮಹಾರಾಷ್ಟ್ರದ ರಾಜಕಾರಣ. ಒಂದು ಕಾಲದ ಬದ್ಧವೈರಿಗಳಾಗಿದ್ದ ಶಿವಸೇನೆ ಜೊತೆ ಕಾಂಗ್ರೆಸ್ ಕೈ ಜೋಡಿಸುವ ಮೂಲಕ ಬಿಜೆಪಿಗೆ ಶಾಕ್ ನೀಡಿತ್ತು. ಮಹಾರಾಷ್ಟ್ರದಲ್ಲಿ ಆದಂತೆ ಗೋವಾ ರಾಜಕಾರಣದಲ್ಲಿಯೂ ಬದಲಾಗಬಹುದು ಎಂಬ ಸುಳಿವನ್ನು ಶಿವಸೇನೆಯ ನಾಯಕ ಸಂಜಯ್ ರಾವತ್ ನೀಡಿದ್ದರು. ಆದ್ರೆ ಶಿವಸೇನೆಗೆ ಹೇಳಿಕೆಗೆ ಪರೋಕ್ಷವಾಗಿ ಟಕ್ಕರ್ ನೀಡಿರುವ ಗೋವಾ ಕಾಂಗ್ರೆಸ್ ನಾವು ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುತ್ತೇವೆ ಎಂದು ಹೇಳುವ ಮೂಲಕ ಎಲ್ಲ ಸುದ್ದಿಗಳಿಂದ ಹೊರ ಬಂದಿದೆ.

ಸಂಜಯ್ ರಾವತ್ ಹೇಳಿದ್ದೇನು? ಗುರುವಾರ ಉದ್ಧವ್ ಠಾಕ್ರೆ ಪ್ರಮಾಣ ವಚನಕ್ಕೂ ಮುನ್ನ ಟ್ವೀಟ್ ಮಾಡಿದ್ದ ಸಂಜಯ್ ರಾವತ್, ನಾವು ಚದುರಂಗದಲ್ಲಿ ಹೇಗೆ ಕಮಾಲ್ ಮಾಡುತ್ತೇವೆ ಅಂದ್ರೆ ನಮ್ಮ ಸೈನಿಕನೇ ರಾಜನನ್ನು ಹೊಡೆದುರಳಿಸುತ್ತಾನೆ ಎಂದು ಬರೆದುಕೊಂಡಿದ್ದಾರೆ. ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ವಿಪಕ್ಷ ನಾಯಕರಾಗಿ ಆಯ್ಕೆಯಾಗಿದ್ದಕ್ಕೆ, ಮುಂದಿನ ದಿನಗಳಲ್ಲಿ ವಿರೋಧ ಪಕ್ಷವೇ ಇರಲ್ಲ. ವಿಪಕ್ಷ ನಾಯಕರಾಗಿ ಆಯ್ಕೆಯಾಗಿರುವ ಫಡ್ನವೀಸ್ ಅವರಿಗೆ ಶುಭಾಶಯಗಳು ಎಂದಿದ್ದರು.

ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಂಜಯ್ ರಾವತ್, ಗೋವಾ ಫಾರ್ವರ್ಡ್ ಪಕ್ಷದ ಅಧ್ಯಕ್ಷ ಮತ್ತು ಗೋವಾದ ಮಾಜಿ ಡಿಸಿಎಂ ವಿಜಯ್ ಸರ್‍ದೇಸಾಯಿ ತಮ್ಮ ಮೂವರು ಶಾಸಕರೊಂದಿಗೆ ಶಿವಸೇನೆಯ ಮೈತ್ರಿ ಸೇರಲಿದ್ದಾರೆ. ಶೀಘ್ರದಲ್ಲಿಯೇ ಮಹಾರಾಷ್ಟ್ರದಲ್ಲಿ ನಡೆದಂತೆ ಗೋವಾದಲ್ಲಿಯೂ ಹೊಸ ರಾಜಕಾರಣದ ಗಾಳಿ ಬೀಸಲಿದೆ. ಕೆಲವೇ ದಿನಗಳಲ್ಲಿ ನೀವೆಲ್ಲರೂ ಗೋವಾ ರಾಜಕಾರಣದಲ್ಲಾಗುವ ಚಮತ್ಕಾರಕ್ಕೆ ಸಾಕ್ಷಿ ಆಗುತ್ತೀರಿ ಎಂದು ಹೇಳಿದ್ದರು.

ಸಂಜಯ್ ರಾವತ್ ಹೇಳಿಕೆ ಗೋವಾ ರಾಜಕಾರಣದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಆಡಳಿತದಲ್ಲಿರುವ ಬಿಜೆಪಿಗೆ ಸರ್ಕಾರ ಉಳಿಸಿಕೊಳ್ಳುವ ಸವಾಲು ಎದುರಾಗಿತ್ತು. ಕಾಂಗ್ರೆಸ್ ಇತರೆ ಸಣ್ಣ ಪಕ್ಷಗಳ ಬೆಂಬಲ ಪಡೆದು, ಆಪರೇಷನ್ ಹಸ್ತದ ಮೂಲಕ ಸರ್ಕಾರ ರಚನೆ ಮಾಡುತ್ತೆ ಎಂಬಿತ್ಯಾದಿ ರಾಜಕೀಯದ ಹೊಸ ಹೊಸ ಲೆಕ್ಕಾಚಾರ ಮತ್ತು ಸಮೀಕರಣಗಳು ಹರಿದಾಡಿದ್ದವು.

ಮೈತ್ರಿಯಿಂದ ದೂರ ಸರಿದ ಕಾಂಗ್ರೆಸ್: ಎಲ್ಲ ಗೊಂದಲಗಳಿಗೆ ತೆರೆ ಎಳೆದಿರುವ ಗೋವಾ ಕಾಂಗ್ರೆಸ್ ಅಧ್ಯಕ್ಷ ಚೋಡನಕರ್, ನಾವು ಕುದುರೆ ವ್ಯಾಪಾರ ನಡೆಸಲ್ಲ. ವಿಪಕ್ಷ ಸ್ಥಾನದಲ್ಲಿಯೇ ಕುಳಿತು ಕೆಲಸ ಮಾಡುತ್ತೇವೆ. 40 ಶಾಸಕರ ಪೈಕಿ 30 ಜನಪ್ರತಿನಿಧಿಗಳು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಹಾಗಾಗಿ ಸರ್ಕಾರ ರಚಿಸುವ ಸಾಧ್ಯತೆಗಳಿಲ್ಲ. ಸರ್ಕಾರ ಬೀಳಿಸುವದಕ್ಕಿಂತ ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವುದಕ್ಕೆ ಮೊದಲ ಆದ್ಯತೆ ನೀಡುತ್ತೇವೆ ಎಂದು ಹೇಳುವ ಮೂಲಕ ಶಿವಸೇನೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಬೆಂಬಲ ನೀಡಿರುವ ಕಾಂಗ್ರೆಸ್, ಗೋವಾದಲ್ಲಿ ತದ್ವಿರುದ್ಧವಾಗಿ ನಿಂತಿದೆ. ಗೋವಾದಲ್ಲಿ ಶಿವಸೇನೆಗೆ ಧ್ವಜ ಹಾರಿಸಲು ಮುಂದಾಗಿದ್ದ ಸಂಜಯ್ ರಾವತ್ ಒಂದು ರೀತಿಯ ಹಿನ್ನಡೆ ಆಗಿದೆ ಎಂಬುವುದು ರಾಜಕೀಯ ವಿಮರ್ಶಕರ ಲೆಕ್ಕಾಚಾರ ಆಗಿದೆ.

Comments

Leave a Reply

Your email address will not be published. Required fields are marked *