ಕಾಂಗ್ರೆಸ್‌ನವರು ವೋಟಿಗಾಗಿ ಕಾಶ್ಮೀರ ಸಹ ಪಾಕಿಸ್ತಾನಕ್ಕೆ ಸೇರಿದ್ದು ಅಂತಾರೆ – ವಿಶ್ವನಾಥ್ ಕಿಡಿ

– ಆರೂವರೆ ಕೋಟಿ ಕನ್ನಡಿಗರಿಗೆ ಲಕ್ಷ್ಮಿ ಹೆಬ್ಬಾಳ್ಕರ್‌ರಿಂದ ಅಪಮಾನ
– ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು – ಬಿಜೆಪಿ ಶಾಸಕ
– ಅನ್ನಭಾಗ್ಯ ಅಕ್ಕಿಯಿಂದಲೇ ಮಂತ್ರಾಕ್ಷತೆ – ಡಿಕೆಶಿ ಹೇಳಿಕೆಗೆ ಅಶ್ವಥ್‌ ನಾರಾಯಣ್‌ ಕೆಂಡ

ಬೆಂಗಳೂರು: ಕಾಂಗ್ರೆಸ್‌ನವರ ಮನಸ್ಥಿತಿ ಹೇಗಿದೆ ಅಂದ್ರೆ, ವೋಟಿಗಾಗಿ ಕಾಶ್ಮೀರ ಸಹ ಪಾಕಿಸ್ತಾನಕ್ಕೆ (Pakistan) ಸೇರಿದ್ದು ಅಂತಾರೆ ಎಂದು ಬಿಜೆಪಿ ಶಾಸಕ ಎಸ್‌.ಆರ್ ವಿಶ್ವನಾಥ್ (Vishwanath) ಕಿಡಿ ಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರಿಂದು, ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹರಾಷ್ಟ್ರಕ್ಕೆ ಸೇರಿತ್ತು ಎಂಬ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿಕೆಗೆ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಮದುವೆ, ಪ್ರವಾಸಕ್ಕೆ ಸಿಗಲಿದೆ ಬಿಎಂಟಿಸಿ ಬಸ್ – ಯಾವ್ಯಾವ ಬಸ್‍ಗೆ ಎಷ್ಟು ರೇಟ್?

ಬೆಳಗಾವಿ (Belagavi) ವಿಶಾಲ ಕರ್ನಾಟಕಕ್ಕೆ ಸೇರಿ ಅನೇಕ ವರ್ಷಗಳಾಗಿವೆ, ಅದು ಮುಗಿದ ಕತೆ. ಆದ್ರೆ ವೋಟಿನ ರಾಜಕಾರಣಕ್ಕೆ ಸಚಿವೆ ನೀಡಿರುವ ಹೇಳಿಕೆ ವಿಷಾದಕರ. ಸದ್ಯ ಕಾಂಗ್ರೆಸ್‌ನವರ ಮನಸ್ಥಿತಿ ಹೇಗಿದೆ ಅಂದ್ರೆ, ಕಾಶ್ಮೀರ ಕೂಡ ಪಾಕಿಸ್ತಾನಕ್ಕೆ ಸೇರಿದ್ದು ಅಂತ ಹೇಳ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಆರೂವರೆ ಕೋಟಿ ಕನ್ನಡಿಗರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಪಮಾನ ಮಾಡಿದ್ದಾರೆ. ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು, ಹಾಗಾಗಿಯೇ ಬೆಳಗಾವಿಯಲ್ಲಿ ಅಧಿವೇಶನ ಮಾಡಲಾಗುತ್ತಿದೆ. ಅವರ ಹೇಳಿಕೆ ಬೇರೆಯವರನ್ನ ಕೆರಳಿಸಲಿದೆ, ಆದ್ದರಿಂದ ಸಿಎಂ ಸಿದ್ದರಾಮಯ್ಯ ಅವರು ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನ ಸಚಿವ ಸಂಪುಟದಿಂದ ಹೊರಗಿಡಬೇಕು ಎಂದು ಒತ್ತಾಯಿಸಿದ್ದಾರೆ.

ಮರಾಠಿಗರೂ ಇವರ ಹೇಳಿಕೆಯನ್ನ ಬೆಂಬಲಿಸಲ್ಲ: ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಇಂತಹ ಸಂದರ್ಭದಲ್ಲಿ ಈ ಹೇಳಿಕೆ ಅವಶ್ಯಕತೆ ಇರಲಿಲ್ಲ. ಬೆಳಗಾವಿ ಈಗ ಕರ್ನಾಟಕಕ್ಕೆ ಸೇರಿದೆ. ರಾಜಕೀಯ ಪ್ರೇರಿತ ಹೇಳಿಕೆ ನೀಡುವ ಕೆಲಸ ಆಗಬಾರದು. ಯಾವುದೇ ಕೆಲಸಗಳು ಜನರ ವಿಶ್ವಾಸ ಗಳಿಸುವಂತಿರಬೇಕು. ಕನ್ನಡಿಗರು ವಿವಿಧ ಸಂಸ್ಕೃತಿಯಲ್ಲಿ ಏಕತೆ ಕಾಣಬೇಕು. ಆದ್ರೆ ಸಚಿವರ ಹೇಳಿಕೆಯನ್ನು ಕನ್ನಡಿಗರು ಮಾತ್ರವಲ್ಲ, ಮರಾಠಿಗರೂ ಬೆಂಬಲಿಸಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಐವರ ಅಸ್ಥಿಪಂಜರ ಪತ್ತೆ ಕೇಸ್‌ – ಮರಣೋತ್ತರ ಪರೀಕ್ಷಾ ವರದಿಯಲ್ಲೂ ಪತ್ತೆಯಾಗದ ಸತ್ಯಾಂಶ

ಅಯೋಧ್ಯೆ ಮಂತ್ರಾಕ್ಷತೆ ವಿಚಾರದಲ್ಲಿ ಡಿಕೆಶಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅಶ್ವಥ್ ನಾರಾಯಣ್, ಅನ್ನಭಾಗ್ಯ ಅಕ್ಕಿಯಿಂದಲೇ ಮಂತ್ರಾಕ್ಷತೆ ಮಾಡಲಾಗ್ತಿದೆ ಅನ್ನೋ ಡಿಕೆ ಶಿವಕುಮಾರ್ ಹೇಳಿಕೆ ಕೀಳುಮಟ್ಟದಿಂದ ಕೂಡಿದೆ. ಹಿಂದೂ ಧರ್ಮದ ವ್ಯಕ್ತಿ ಈ ರೀತಿ ಹೇಳಿಕೆ ನೀಡೋದು ಸರಿಯಲ್ಲ. ಭಗವಂತನನ್ನ ಪೂಜಿಸೋರು, ಈ ರೀತಿಯ ಹೇಳಿಕೆ ನೀಡಬಾರದು, ಕೂಡಲೇ ಕ್ಷಮೆಯಾಚಿಸಿ, ಗೌರವದಿಂದ ನಡೆದುಕೊಳ್ಳಿ. ನಿಮ್ಮ ಗೌರವಕ್ಕೆ ಧಕ್ಕೆ ತಂದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.