ಚೌಕಿದಾರನ ಕಳ್ಳತನ ಬಯಲಾಗುತ್ತಿದ್ದಂತೆ ದೇಶವನ್ನೇ ಚೌಕಿದಾರ ಅಂದ್ರು: ರಾಹುಲ್ ಗಾಂಧಿ

ಕಲಬುರಗಿ: ಚೌಕಿದಾರನ ಕಳ್ಳತನ ಬಯಲಾಗುತ್ತಿದ್ದಂತೆ ಇಡೀ ದೇಶವನ್ನೇ ಚೌಕಿದಾರ ಎಂದು ಸುಳ್ಳು ಹೇಳುವ ಮೂಲಕ ತಮ್ಮ ತಪ್ಪುಗಳನ್ನು ಮರೆಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಲಬರುಗಿಯ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಸಂವಿಧಾನವನ್ನ ಕಗ್ಗೊಲೆ ಮಾಡಲು ಮುಂದಾಗಿದ್ದು, ಬಿಜೆಪಿ ಮತ್ತು ಆರ್‍ಎಸ್‍ಎಸ್ ಸಂವಿಧಾನ ರಕ್ಷಣೆ ಮಾಡುವುದಿಲ್ಲ. ರಫೇಲ್ ನಂತಹ ದೊಡ್ಡ ಡೀಲ್ ನಮ್ಮ ದೇಶದಲ್ಲಿ ನಡೆದಿದೆ. ಪ್ರಧಾನಿ ಮೊದಲು ಫ್ರಾನ್ಸ್ ಹೋಗುತ್ತಿದ್ದಂತೆ ಅನಿಲ್ ಅಂಬಾನಿ ಹೋಗುತ್ತಾರೆ. ಈ ಮೂಲಕ 526 ಕೋಟಿಯ ಡೀಲ್ ಅನ್ನು 1600 ಕೋಟಿ ಡೀಲ್ ಮಾಡಿಕೊಳ್ಳುವ ಮೂಲಕ 30 ಸಾವಿರ ಕೋಟಿ ಹಣವನ್ನು ಜೇಬಿಗೆ ಇಳಿಸಿಕೊಳ್ಳುತ್ತಾರೆ. ಈ ಬಗ್ಗೆ ಸಿಬಿಐ ತನಿಖೆ ಮಾಡಲು ಮಂದಾದ್ರೆ ಅದನ್ನು ತಡೆಹಿಡಿಯಲಾಗಿತ್ತು ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಆರ್‍ಬಿಐ ನಿರ್ದೇಶಕರ ಅನುಮೋದನೆ ಪಡೆಯದೇ 500 ಮತ್ತು 1 ಸಾವಿರ ಮೌಲ್ಯದ ನೋಟುಗಳ್ನು ಅಮಾನೀಕರಣಗೊಳಿಸಲಾಗಿತ್ತು. ನೋಟ್ ಬಂದ್ ಮಾಡಿದ್ದಾಗ ಎಲ್ಲ ಕಳ್ಳರು ಬ್ಯಾಂಕ್ ಹಿಂಬದಿ ನಿಂತು ಹಣ ವರ್ಗಾವಣೆ ಮಾಡಿಕೊಂಡರು. ಅದಾದ ಬಳಿಕ ಗಬ್ಬರ್ ಸಿಂಗ್ ತೆರಿಗೆ (ಜಿಎಸ್‍ಟಿ) ಜಾರಿಗೆ ತರಲಾಯ್ತು. ಅದರಲ್ಲಿ ಐದು ತರಹದ ತೆರಿಗೆ ವಿಧಿಸಲಾಗಿದ್ದು, ನಾವು ಅಧಿಕಾರಕ್ಕೆ ಬಂದ್ರೆ ಜಿಎಸ್‍ಟಿ ಬದಲಾಯಿಸುತ್ತೇವೆ. ಈ ಮೂಲಕ ಏಕ ರೂಪ ತೆರಿಗೆ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.

ಚೌಕಿದಾರ ಕಳ್ಳತನ ಮಾಡುವಾಗ ಸಿಕ್ಕಿ ಬಿದ್ದಾಗ ಇಡೀ ದೇಶ ಚೌಕಿದಾರ ಅಂತಾ ಎಂದು ಸುಳ್ಳು ಹೇಳುತ್ತಾನೆ. ನಾವು ಹೇಳಿದ್ದಂತೆ 371 ಕಲಂ ಜಾರಿಗೆ ತರುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಈಗ ಕರ್ನಾಟಕ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ರೈತರ ಸಾಲಮನ್ನಾ ಮಾಡಲಾಗಿದೆ. ಕರ್ನಾಟಕದಲ್ಲಿ ಸಮಿಶ್ರ ಸರ್ಕಾರವಿದ್ದು, ಮಾತು ನೀಡಿದ್ದಂತೆ ರೈತರ ಸಾಲಮನ್ನಾ ಮಾಡಿದ್ದೇವೆ. ಆದರೆ ಕರ್ನಾಟಕಕ್ಕೆ ಬಂದ ಮೋದಿ ರೈತರ ಸಾಲಮನ್ನಾ ಮಾಡಿಲ್ಲ ಅಂತಾ ಸುಳ್ಳು ಹೇಳುತ್ತಾರೆ. ಆದರೆ ಇಲ್ಲಿನ ಜನರಿಗೆ ಸತ್ಯದ ಅರಿವಿದೆ. ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳಲ್ಲಿ ಯಾವ ಬೆಳೆ ರೈತರ ಬೆಳೆಯುತ್ತಾರೆ ಅದಕ್ಕೆ ಪೂರಕ ಉದ್ಯಮಗಳನ್ನು ಆರಂಭಿಸಲು ಅಲ್ಲಿನ ಸರ್ಕಾರಗಳು ನಿರ್ಣಯಿಸಿವೆ. ಆಲೂಗಡ್ಡೆ ಬೆಳೆಯುವ ರಾಜ್ಯದಲ್ಲಿ ಆಲೂ ಚಿಪ್ಸ್, ಇನ್ನು ಟೊಮಟೊ ಬೆಳೆಯುವ ಪ್ರದೇಶದಲ್ಲಿ ಕ್ಯಾಚಪ್ ನಂತಹ ಉದ್ದಿಮೆ ಆರಂಭಿಸುವ ಮೂಲಕ ರೈತರ ಹಿತ ಹಾಗು ಉದ್ಯೋಗ ಸೃಷ್ಟಿಸಲಾಗುವುದು ಎಂದರು.

Comments

Leave a Reply

Your email address will not be published. Required fields are marked *