ಬಿಜೆಪಿ ಹಿಂದುತ್ವ ಅಸ್ತ್ರಕ್ಕೆ ಕಾಂಗ್ರೆಸ್ ಪ್ರತ್ಯಸ್ತ್ರ – ಜನಾರ್ದನ ಪೂಜಾರಿ ಸದ್ಬಳಕೆಗೆ ಮೆಗಾ ಪ್ಲಾನ್

ಮಂಗಳೂರು: 2018ರ ವಿಧಾನಸಭಾ ಚುನಾವಣೆಯು ಕಾಂಗ್ರೆಸ್ ಹಾಗೂ ಬಿಜೆಪಿ ಪಾಲಿಗೆ ಮಾಡು ಇಲ್ಲವೆ ಮಡಿ ಚುನಾವಣೆಯಾಗಲಿದ್ದು, ಕರಾವಳಿಯಲ್ಲಿ ಬಿಜೆಪಿ ಹಿಂದುತ್ವದ ಪ್ರಬಲ ಅಸ್ತ್ರ ಪ್ರಯೋಗಿಸಿದೆ. ಬಿಜೆಪಿಯ ಈ ಅಸ್ತ್ರಕ್ಕೆ ಕೌಂಟರ್ ಕೊಡಲು ಮುಂದಾಗಿರುವ ಕಾಂಗ್ರೆಸ್, ತನ್ನ ಬತ್ತಳಿಕೆಯಲ್ಲಿರುವ ಹಳೆಯ ಪ್ರಬಲ ಅಸ್ತ್ರ ಬಳಕೆಗೆ ನಿರ್ಧರಿಸಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

2 ದಿನಗಳ ಹಿಂದೆಯಷ್ಟೆ ಮಂಗಳೂರಿಗೆ ಬಂದಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಆ ಹಳೆಯ ಅಸ್ತ್ರಕ್ಕೆ ಹೊಳಪು ನೀಡುವ ಕೆಲಸ ಮಾಡಿದ್ದಾರೆ. ಕರಾವಳಿಯಲ್ಲಿ ಪಕ್ಷ ಗೆಲ್ಲಿಸಲು ಅದೇ ಪ್ರಬಲ ಅಸ್ತ್ರ ಅನಿವಾರ್ಯ ಎಂದು ಸಿಎಂ ಸಿದ್ದರಾಮಯ್ಯ ಅವರು ಕೂಡ ರಾಹುಲ್ ಗಾಂಧಿ ಬಳಿ ಒಪ್ಪಿಕೊಂಡಿದ್ದಾರೆ. ಹೀಗೆ ಬಿಜೆಪಿಗೆ ಎದುರಾಗಿ ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರನ್ನು ಬಳಸಲು ಮುಂದಾಗಿದೆ. ಇದನ್ನೂ ಓದಿ:  ಕುದ್ರೋಳಿಯಲ್ಲಿ ಮನಸ್ಸಿನ ನೋವನ್ನು ರಾಹುಲ್ ಬಳಿ ತೋಡಿಕೊಂಡ ಪೂಜಾರಿ!

ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರದಲ್ಲಿ 2013 ರ ಚುನಾವಣೆ ಯಲ್ಲಿ ಕಾಂಗ್ರೆಸ್ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ 2018 ರ ಚುನಾವಣೆಯಲ್ಲಿ 2 ಸ್ಥಾನ ಗೆದ್ದರೆ ಹೆಚ್ಚು ಎಂಬ ಸ್ಥಿತಿ ಇದೆ ಎಂಬುದು ಕಾಂಗ್ರೆಸ್ ಸಮೀಕ್ಷೆಯಿಂದ ತಿಳಿದು ಬಂದಿದೆ. ಆದ್ದರಿಂದ ಗೆಲುವಿಗಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜನಾರ್ದನ ಪೂಜಾರಿಯವರ ಮೊರೆ ಹೋಗಿದೆ ಎಂದು ಹೇಳಲಾಗ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ನಾಯಕ ಜನಾರ್ದನ ಪೂಜಾರಿ ಬಿಲ್ಲವ ಸಮುದಾಯಕ್ಕೆ ಸೇರಿದವರಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವ ಮತದಾರರೇ ನಿರ್ಣಾಯಕ. ಇನ್ನೊಂದೆಡೆ ರಾಜ್ಯ ನಾಯಕರ ವಿರುದ್ಧ ಜನಾರ್ದನ ಪೂಜಾರಿ ಕೂಡ ಅಸಮಧಾನ ಹೊಂದಿದ್ದರು. ಹಿರಿಯ ನಾಯಕನ ಮನವೊಲಿಕೆ ಜೊತೆಗೆ ಪಕ್ಷದ ಗೆಲುವಿನ ಹೊಣೆಯನ್ನು ಜನಾರ್ದನ ಪೂಜಾರಿ ಹೆಗಲಿಗೆ ರಾಹುಲ್ ಗಾಂಧಿ ಹೊರಿಸಿದ್ದಾರೆ.

ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವ ಜವಬ್ದಾರಿ ಜನಾರ್ದನ ಪೂಜಾರಿ ಅವರದ್ದಾಗಿದೆ. ಆ ಮೂಲಕ ಬಿಲ್ಲವ ಸಮುದಾಯದ ಮತವನ್ನು ಸೆಳೆದಂತಾಯ್ತು. ಅಲ್ಲದೆ 80 ವರ್ಷದ ಹಿರಿಯ ನಾಯಕನ ಸತತ ಸೋಲಿನ ಸಿಂಪತಿ ಪಕ್ಷಕ್ಕೆ ಮತವಾಗಿ ಪರಿವರ್ತನೆ ಆಗಬಹುದು ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರವಾಗಿದೆ. ಒಟ್ಟಿನಲ್ಲಿ ಜನಾರ್ದನ ಪೂಜಾರಿ ಎಂಬ ಹಿರಿಯ ನಾಯಕನಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಟ್ಟ ಕಟ್ಟಿ ಗೆಲುವಿನ ದಡ ಸೇರುವ ಕಾಂಗ್ರೆಸ್ ನ ಯತ್ನ ಸಫಲವಾಗುತ್ತಾ ಎಂಬುದೇ ಸದ್ಯದ ಕುತೂಹಲ.

Comments

Leave a Reply

Your email address will not be published. Required fields are marked *