ಬೆಂಗಳೂರು: ಶತಾಯ ಗತಾಯ ಮಾಡಿಯಾದರೂ ಸಮ್ಮಿಶ್ರ ಸರ್ಕಾರವನ್ನು ಕೆಡವಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಕಾಂಗ್ರೆಸ್ ರೆಸಾರ್ಟ್ ರಾಜಕೀಯಕ್ಕೆ ಗುನ್ನಾ ಹೊಡೆಯಲು ಮಾಸ್ಟರ್ ಪ್ಲಾನ್ ಮಾಡಿದೆ.
ಹೌದು, ಇಬ್ಬರು ಪಕ್ಷೇತರರು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಳ್ಳುವ ಮೂಲಕ ಆಪರೇಷನ್ ಕಮಲದ ಮೊದಲ ಹಂತ ಯಶಸ್ವಿಯಾಗಿದೆ. ಈಗ ಎರಡನೇ ಹಂತ ಆರಂಭಗೊಂಡಿದ್ದು, ಈ ಹಂತದಲ್ಲಿ ನಾಲ್ವರು ಅತೃಪ್ತ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಯಿದೆ. ರಾಜೀನಾಮೆ ನೀಡಲು ಶಾಸಕರು ಸಿದ್ದರಾಗಿದ್ದಾರೆ ಎನ್ನಲಾಗಿದ್ದು ಯಾವಾಗ ನೀಡುತ್ತಾರೆ ಎನ್ನುವುದೇ ಸದ್ಯದ ಕುತೂಹಲ.

ಇಂದು ಅಥವಾ ಭಾನುವಾರ ನಾಲ್ವರು ರಾಜೀನಾಮೆ ನೀಡುವ ಸಾಧ್ಯತೆಯಿದೆ. ಕೈ ಅತೃಪ್ತ ಶಾಸಕರಿಂದ ರಾಜೀನಾಮೆ ಕೊಡಿಸಿ ಆಪರೇಷನ್ ಸ್ಟೇಜ್ 2 ಪೂರ್ಣಗೊಳಿಸಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ. ಶಾಸಕರ ರಾಜೀನಾಮೆ ಕೊಟ್ಟ ಬಳಿಕ ಆಪರೇಷನ್ ಮೂರನೇ ಹಂತವನ್ನು ಆರಂಭಿಸಲಿದೆ. ಮೂರನೇ ಹಂತದಲ್ಲಿ ಮತ್ತಷ್ಟು ಅತೃಪ್ತ ಶಾಸಕರನ್ನು ಸೆಳೆಯುವ ಪ್ಲಾನ್ ಅನ್ನು ಬಿಜೆಪಿ ಹಾಕಿಕೊಂಡಿದೆ. ಒಟ್ಟು 7 ಮಂದಿ ಶಾಸಕರನ್ನು ತನ್ನತ್ತ ಸೆಳೆಯಲು ಪ್ಲಾನ್ ಮಾಡಿದೆ ಎನ್ನಲಾಗಿದೆ. ಆಪರೇಷನ್ 3 ಕಾರ್ಯಗತಗೊಳಿಸುವ ಮುನ್ನ ರಾಜ್ಯಪಾಲರು, ಸ್ಪೀಕರ್ ಮುಂದೆ ಬಿಜೆಪಿ ಶಾಸಕರ ಪರೇಡ್ ಮಾಡಿ ತಮ್ಮ ಬಲವನ್ನು ತೋರಿಸುವ ಸಾಧ್ಯತೆಯಿದೆ.

ಜನವರಿ 14 ರಂದು ಮೂರು ಹಂತದಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಲು ಮುಂದಾಗಿದೆ ಎನ್ನುವ ಎಕ್ಸ್ ಕ್ಲೂಸಿವ್ ಸುದ್ದಿಯನ್ನು ಪಬ್ಲಿಕ್ ಟಿವಿ ಮೊದಲು ಪ್ರಸಾರ ಮಾಡಿತ್ತು. ಶುಕ್ರವಾರ ಶಾಸಕಾಂಗ ಸಭೆಗೆ ವಿಪ್ ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ತನ್ನ ಶಾಸಕರಿಗೆ ಬಿಸಿ ಮುಟ್ಟಿಸಿತ್ತು. ಆದರೆ ಈ ವಿಪ್ ಗೆ ತಲೆ ಕೆಡಿಸಿಕೊಳ್ಳದ ನಾಲ್ವರು ಶಾಸಕರು ಸಭೆಗೆ ಹಾಜರಾಗದೇ ನೇರವಾಗಿ ಬಂಡಾಯದ ಬಾವುಟ ಹಾರಿಸಿದ್ದಾರೆ. ಬಂಡಾಯ ಹಾರಿಸಿದ ಶಾಸಕರ ಜೊತೆಗೆ ಸಿಎಲ್‍ಪಿ ಸಭೆಯಲ್ಲಿ ಹಾಜರಾಗಿರುವ ಕೆಲ ಶಾಸಕರು ಜೊತೆಯಲ್ಲಿದ್ದಾರೆ ಎನ್ನುವ ಖಚಿತ ಮಾಹಿತಿ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಎಲ್ಲ ಶಾಸಕರನ್ನು ಬಿಡದಿಯ ಈಗಲ್ ಟನ್ ರೆಸಾರ್ಟ್ ಗೆ ಶಿಫ್ಟ್ ಮಾಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply