ಈ ಸರ್ಕಾರ ಇದ್ದರೆಷ್ಟು, ಬಿದ್ದರೆಷ್ಟು- ಮಾಜಿ ಸಿಎಂ ಬಳಿ ಕಾಂಗ್ರೆಸ್ ಶಾಸಕರ ಆಕ್ರೋಶ

ಬೆಂಗಳೂರು: ನಿಗಮ ಮಂಡಳಿ ವಿಷಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಕಿತ್ತಾಟ ತಾರಕಕ್ಕೇರಿದೆ. ನಿಗಮ ಮಂಡಳಿ ಕುರ್ಚಿಯಾದ್ರೂ ಸಿಗುತ್ತೆ ಎಂದು ಅಂದ್ಕೊಂಡಿದ್ದ ಕೆಲ ಕಾಂಗ್ರೆಸ್ ಶಾಸಕರು, ಸಹಿ ಹಾಕದ ಸಿಎಂ ಕುಮಾರಸ್ವಾಮಿ ವಿರುದ್ಧ ಎಷ್ಟು ರೋಸಿ ಹೋಗಿದ್ದಾರೆ ಎಂದರೆ ಈ ಸರ್ಕಾರ ಇದ್ದರೆಷ್ಟು, ಬಿದ್ದರೆಷ್ಟು ಅನ್ನೋ ಸಿಟ್ಟನ್ನ ಮಾಜಿ ಸಿಎಂ ಸಿದ್ದರಾಮಯ್ಯ ಬಳಿ ಹೊರಹಾಕಿದ್ದಾರಂತೆ.

ಸಂಪುಟ ವಿಸ್ತರಣೆ ವೇಳೆ ಹೈಕಮಾಂಡ್ ತನ್ನ ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನ ಹಂಚಿಕೆ ಮಾಡಿತ್ತಾದ್ರೂ ಇದೂವರೆಗೂ ಸಿಎಂ ಕುಮಾರಸ್ವಾಮಿ ಸಹಿ ಹಾಕಿಲ್ಲ. ನಾವೇನ್ ಜೆಡಿಎಸ್ ಬಳಿ ಭಿಕ್ಷೆ ಕೇಳ್ಬೇಕಾ..? ಕಾಂಗ್ರೆಸ್ ಪಕ್ಷದ ತೀರ್ಮಾನ ಪ್ರಶ್ನಿಸೋಕೆ ಜೆಡಿಎಸ್‍ನವರು ಯಾರು..?. ರಾಹುಲ್ ಗಾಂಧಿಯೇ ಓಕೆ ಅಂದ್ಮೇಲೂ ಕುಮಾರಸ್ವಾಮಿ ಸಹಿ ಹಾಕ್ತಿಲ್ಲ ಅಂದ್ರೆ ಏನ್ ಅರ್ಥ..? ನಮ್ಮದು 80 ಶಾಸಕರು ಇರೋ ಪಕ್ಷ. 38 ಜನ ಶಾಸಕರಿರುವ ಜೆಡಿಎಸ್‍ನವರ ಮಾತು ನಾವು ಕೇಳ್ಬೇಕಾ..? ಮಂಗಳವಾರದವರೆಗೆ ಡೆಡ್‍ಲೈನ್ ಕೊಡ್ತೀವಿ, ನೀವೇ ಮಾತಾಡಿಸಿ ಸರಿ ಮಾಡಿ. ಇಲ್ಲಾಂದ್ರೆ ನಾವೇ ಸೀದಾ ಹೋಗಿ ರಾಹುಲ್ ಗಾಂಧಿಗೆ ದೂರು ಕೊಡ್ತೀವಿ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಬಳಿ 14 ಮಂದಿ ಕಾಂಗ್ರೆಸ್ ಶಾಸಕರು ಸಿಟ್ಟು ಹೊರಹಾಕಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ನಿಗಮ ಮಂಡಳಿ ವಿಚಾರಕ್ಕೆ ಸಂಬಂಧಿಸಿದಂತೆ ದೋಸ್ತಿ ಪಕ್ಷಗಳ ಮಧ್ಯೆ ಸರಿಹೋಗುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಮೊದಲು ಹಂಚಿಕೆಯಾದ ರೀತಿಯಲ್ಲೇ ನಾವು ಪಟ್ಟಿಯನ್ನು ಪ್ರಕಟಣೆ ಮಾಡಿದ್ದೇವೆ ಅನ್ನೋದು ಕಾಂಗ್ರೆಸ್ ನಾಯಕರ ವಾದವಾಗಿದೆ. ಆದ್ರೆ 3-4 ನಿಗಮಗಳ ವಿಚಾರದಲ್ಲಿ ಜೆಡಿಎಸ್, ಕಾಂಗ್ರೆಸ್ ಗೆ ಬಿಟ್ಟು ಕೊಡಲು ಸಿದ್ಧರಿಲ್ಲ ಅನ್ನುವಂತದ್ದು ಈಗ ವಿವಾದಕ್ಕೀಡಾಗಿರುವುದು. ಹಾಗಾಗಿ ಆ ಸಮಸ್ಯೆಯನ್ನು ಬಗೆಹರಿಸಿ ಶಾಸಕರು ಕೂಡ ಅಧಿಕಾರವಿಲ್ಲದೇ 7 ತಿಂಗಳಿನಿಂದ ಕಾಯುತ್ತಿದ್ದು, ಈ ಸಮಸ್ಯೆ ಬಗೆಹರಿಯಲಿಲ್ಲ ಅಂದ್ರೆ ಕಷ್ಟವಾಗುತ್ತೆ ಅನ್ನುವ ನಿಟ್ಟಿನಲ್ಲಿ 12 ಜನ ಶಾಸಕರು ನಿನ್ನೆ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮಂಗಳವಾರ ಸಂಜೆ 5 ಗಂಟೆಯೊಳಗೆ ಸಮಸ್ಯೆ ಪರಿಹರಿಸಿ. 80 ಜನ ಶಾಸಕರು ಇರುವ ನಾವು 38 ಜನ ಇರುವಂತಹ ಪಕ್ಷದ ಮುಂದೆ ಕೈಕಟ್ಟಿ ನಿಲ್ಲೋದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *