ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಅಸಮಾಧಾನ ಸ್ಫೋಟ!

-ಸಿಎಂ ವಿರುದ್ಧ ಕಾಂಗ್ರೆಸ್ ನಾಯಕರ ಆರೋಪಗಳ ಸುರಿಮಳೆ

ಬೆಳಗಾವಿ: ನಗರದಲ್ಲಿ ಬೆಳಗ್ಗೆ ನಡೆದಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಅಸಮಾಧಾನ ಸ್ಫೋಟಗೊಂಡಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಗೈರು ಹಾಜರಾಗಿದ್ದರು. ವಿಧಾನಸಭೆಯ 80 ಹಾಗೂ ಮೇಲ್ಮನೆಯ 39 ಸದಸ್ಯರ ಪೈಕಿ, ಕೇವಲ 58 ಮಂದಿ ಮಾತ್ರ ಹಾಜರಾಗಿದ್ದರು.

ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ, ಸಚಿವ ಸ್ಥಾನದ ಆಕಾಂಕ್ಷಿಗಳಾದ ರಾಮಲಿಂಗಾರೆಡ್ಡಿ, ರೋಷನ್ ಬೇಗ್, ಎಂ.ಬಿ ಪಾಟೀಲ್, ಎಸ್ ಆರ್ ಪಾಟೀಲ್, ಸುಧಾಕರ್, ಬಿ ನಾಗೇಂದ್ರ ಸೇರಿದಂತೆ, ಉತ್ತರ ಕರ್ನಾಟಕದ ಬಹುತೇಕ ಶಾಸಕರು ಗೈರು ಹಾಜರಾಗಿದ್ದರು. ಹೈವೋಲ್ಟೇಜ್ ಸಿಎಲ್‍ಪಿ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಶಾಸಕರು ಆರೋಪಗಳ ಸುರಿಮಳೆಗೈದಿದ್ದಾರಂತೆ.

ಆರೋಪ 1: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಾರತಮ್ಯ (ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಆಗುತ್ತಿಲ್ಲ. ಜೆಡಿಎಸ್ಸಿಗೊಂದು ನ್ಯಾಯ. ಕಾಂಗ್ರೆಸ್ಸಿಗೊಂದು ನ್ಯಾಯ. ನಮ್ಮ ಕ್ಷೇತ್ರಗಳಿಗೆ ನೀಡುತ್ತಿರುವ ಅನುದಾನ ಸಾಕಾಗುತ್ತಿಲ್ಲ)

ಆರೋಪ 2: ಜೆಡಿಎಸ್ ಹಿಡಿತ ಸಾಧಿಸದಂತೆ ನೋಡಿಕೊಳ್ಳಿ! (ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಪಾರುಪತ್ಯ ಮುಂದುವರೆದಿದೆ. ಮೈತ್ರಿಯಿಂದಾಗಿ, ಕಾಂಗ್ರೆಸ್ ಬಲಿಷ್ಠವಾಗಿರೋ ಭಾಗಗಳಲ್ಲೂ ಜೆಡಿಎಸ್ ಹಿಡಿತ ಸಾಧಿಸಿದೆ. ಮುಂದೆ ಲೋಕಸಭೆ ಚುನಾವಣೆ ಬರುತ್ತಿರೋದ್ರಿಂದ ನಾವೆಲ್ಲಾ ಎಚ್ಚರಿಕೆ ವಹಿಸಬೇಕಾಗಿದೆ)

ಆರೋಪ 3: ನಮ್ಮದೇ ಸರ್ಕಾರ ಇದ್ದರೂ ಬಡ್ತಿ ಮೀಸಲು ತಾರತಮ್ಯ (ಬಡ್ತಿ ಮೀಸಲಾತಿ ವಿಷಯದಲ್ಲಿ ನಮ್ಮದೆ ಸರ್ಕಾರ ಪರಿಶಿಷ್ಟರಿಗೆ ನ್ಯಾಯ ಕೊಡೋಕೆ ಮುಂದಾಗಿತ್ತು. ಆದರೆ ಈ ಸರ್ಕಾರದಲ್ಲಿ ಅದರ ಯಾವ ಲಕ್ಷಣ ಕಾಣಿಸುತ್ತಿಲ್ಲ. ನಮ್ಮ ಪ್ರಯತ್ನ ಹಾಳಾಗದಂತೆ ನೋಡಿಕೊಳ್ಳಿ- ಶಾಸಕಿ ರೂಪ ಶಶಿಧರ್)

ಆರೋಪ 4: ಮೇಲ್ಮನೆ ಸದಸ್ಯರಿಗೂ ಆದ್ಯತೆ ನೀಡಿ (ಸಂಪುಟ ಹಾಗೂ ನಿಗಮ ಮಂಡಳಿಗಳಿಗೆ ನೇಮಕ ಮಾಡುವಾಗ ಮೇಲ್ಮನೆ ಸದಸ್ಯರನ್ನೂ ಪರಿಗಣಿಸಬೇಕು. ನಾವೂ ಪಕ್ಷಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಆದ್ಯತೆ ನೀಡಬೇಕು)

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *