ನನಗೂ ಐಎಂಎ ಜ್ಯುವೆಲರ್ಸ್​ಗೂ ಸಂಬಂಧವಿಲ್ಲ: ರೋಷನ್ ಬೇಗ್

ನವದೆಹಲಿ: ನನಗೂ ಐಎಂಎ ಜ್ಯುವೆಲರ್ಸ್​ಗೂ ಸಂಬಂಧವಿಲ್ಲ. ನನ್ನ ವಿರುದ್ಧ ಫೇಕ್ ಆಡಿಯೋ ಬಿಡುಗಡೆಯಾಗಿದೆ ಎಂದು ಕಾಂಗ್ರೆಸ್ ಮಾಜಿ ಸಚಿವ ರೋಷನ್ ಬೇಗ್ ಹೇಳಿದ್ದಾರೆ.

ದೆಹಲಿಯಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಮಾಜಿ ಸಚಿವ, 400 ಕೋಟಿ ಹಣ ನೀಡಿರುವುದಾಗಿ ಆಡಿಯೋದಲ್ಲಿ ಹೇಳಿದ್ದಾರೆ. ಹಣಕ್ಕೇನು ಬೆಲೆ ಇಲ್ವಾ? 400 ಕೋಟಿ ರೂ. ಅಂದ್ರೆ 400 ರೂಪಾಯಿನಾ? ನನಗೂ ಐಎಂಎ ಜ್ಯುವೆಲರ್ಸ್​ಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ.

ಐಎಂಎನವರು ನಮ್ಮ ಕ್ಷೇತ್ರದಲ್ಲಿ ಶಾಲೆ ಕಟ್ಟಿಸಿದ್ದಾರೆ. ಆ ಶಾಲೆ ಪಿಪಿಪಿ ಮಾಡೆಲ್ ಮೂಲಕ ನಿರ್ಮಾಣವಾಗಿದೆ. ನಮ್ಮ ಸಿಯಾಸತ್ ಉರ್ದು ಪತ್ರಿಕೆಗೆ ಜಾಹೀರಾತು ನೀಡುತ್ತಿದ್ದರು. ಅದನ್ನು ಹೊರತುಪಡಿಸಿ ಅವರ ಹಾಗೂ ನನ್ನ ನಡುವೆ ಯಾವುದೇ ಸಂಬಂಧವಿಲ್ಲ. ಐಎಂಎನಲ್ಲಿ ನಾನು ಬಂಡವಾಳ ಹೂಡಿಕೆ ಮಾಡಿಲ್ಲ. ಯಾರೋ ನನ್ನ ವಿರುದ್ಧ ಪಿತೂರಿ ಮಾಡಲು ಆಡಿಯೋ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು.

ಕೆಲ ದಿನಗಳ ಹಿಂದೆಯೂ ಸುಳ್ಳು ಸುದ್ದಿ ವ್ಯಾಟ್ಸಪ್‍ನಲ್ಲಿ ಹರಿದಾಡಿತ್ತು. ಅದರ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇನೆ. ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೇಕ್ ಆಡಿಯೋ ಬಗ್ಗೆ ತನಿಖೆ ಮಾಡುವಂತೆ ಕೇಳಿಕೊಂಡಿದ್ದೇನೆ. ಈ ಪ್ರಕರಣವನ್ನು ತಕ್ಷಣವೇ ಸಿಬಿಐ ವರ್ಗಾಯಿಸಲಿ. ನಾನು ತನಿಖೆ ಎದುರಿಸಲು ಸಿದ್ಧನಾಗಿದ್ದೇನೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *