ಎಂಜಿನಿಯರ್ ಮೇಲೆ ಕೆಸರು ಎರಚಿ ಕಾಂಗ್ರೆಸ್ ಶಾಸಕನಿಂದ ಹಲ್ಲೆ

ಮುಂಬೈ: ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿ ಸಂಸದರ ಪುತ್ರ ಅಧಿಕಾರಿಯ ಮೇಲೆ ಬ್ಯಾಟ್‍ನಿಂದ ಹಲ್ಲೆ ನಡೆಸಿದ ಘಟನೆ ಮಾಸುವ  ಮುನ್ನವೇ ಇಂತಹದ್ದೇ ಮತ್ತೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರ ಮಾಜಿ ಸಿಎಂ ನಾರಾಯಣ್ ರಾಣೆ ಅವರ ಪುತ್ರ ಕಾಂಗ್ರೆಸ್ ಪಕ್ಷದ ಶಾಸಕ ನಿತೇಶ್ ರಾಣೆ ಎಂಜಿನಿಯರ್ ಮೇಲೆ ಕಾರ್ಯಕರ್ತರೊಂದಿಗೆ ಕೆಸರು ಸುರಿದು ಹಲ್ಲೆ ನಡೆಸಿದ್ದಾರೆ. ಅಲ್ಲದೇ ಸ್ಥಳದಲ್ಲಿದ್ದ ಬ್ರಿಡ್ಜ್ ಗೆ ಕಟ್ಟಿಹಾಕಿದ್ದಾರೆ.

ಮಾಧ್ಯಮ ವರದಿಯ ಅನ್ವಯ ಶಾಸಕ ನಿತೇಶ್ ನಾರಾಯಣ್ ರಾಣೆ ಗುರುವಾರ ಮಹಾರಾಷ್ಟ್ರ, ಗೋವಾ ನಡುವಿನ ಕಂಕವ್ಲಿ ಹೆದ್ದಾರಿಯ ರಸ್ತೆ ವೀಕ್ಷಣೆ ಮಾಡಲು ತೆರಳಿದ್ದರು. ಆದರೆ ಈ ಸಂದರ್ಭದಲ್ಲಿ ರಸ್ತೆ ಗುಂಡಿಗಳನ್ನು ಕಂಡು ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಜೆಪಿ ಶಾಸಕ ಆಕಾಶ್ ವಿಜಯವರ್ಗಿಯಾ ಅವರು ಪುರಸಭೆಯ ಅಧಿಕಾರಿ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದರು. ಆ ಬಳಿಕ ಅವರು ಜಾಮೀನು ಪಡೆದು ಹೊರ ಬಂದಿದ್ದರು. ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಶಾಸಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಈ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಖಂಡಿಸಿದ್ದರು. ಅಲ್ಲದೇ ಯಾರ ಮಗನಾದರೂ ಅಂತಹವರನ್ನು ಪಕ್ಷದಿಂದ ಹೊರ ಹಾಕಬೇಕು ಎಂದು ಹೇಳಿದ್ದರು. ಇತ್ತ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಶಾಸಕರೇ ಅಧಿಕಾರಿಯ ಮೇಲೆ ಕಾರ್ಯಕರ್ತರೊಂದಿಗೆ ಹಲ್ಲೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *