ಟಿಕೆಟ್ ನೀಡುವಂತೆ ಯಾರನ್ನೂ ಕೇಳುವ ಅಗತ್ಯವೇ ಇಲ್ಲ: ಕಾಂಗ್ರೆಸ್ ಶಾಸಕ

– ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮುನ್ನವೇ ನಾಮಪತ್ರ ಸಲ್ಲಿಕೆ

ಚಂಡೀಗಢ: ಪಕ್ಷವು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಮೇಲೆಯೇ ನಾಮಪತ್ರ ಸಲ್ಲಿಸಬೇಕು. ಆದರೆ ಹರ್ಯಾಣದ ಕಾಂಗ್ರೆಸ್ ಶಾಸಕರೊಬ್ಬರು ಪಟ್ಟಿ ಬಿಡುಗಡೆಗೂ ಮುನ್ನವೇ ನಾಮಪತ್ರ ಸಲ್ಲಿಸಿ ‘ಕೈ’ ನಾಯಕರಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಹರ್ಯಾಣ ವಿಧಾನಸಭಾ ಚುನಾವಣೆ ಘೋಷಣೆ ಆಗಿದ್ದು, ಅಕ್ಟೋಬರ್ 21ರಂದು ಮತದಾನ ನಡೆಯಲಿದೆ. ಈವರೆಗೂ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಆದರೆ ಮೆಹಮ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ದಂಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಶಾಸಕರ ಈ ನಡೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆನಂದ್ ಸಿಂಗ್ ದಂಗಿ, ಟಿಕೆಟ್ ನೀಡುವಂತೆ ಯಾರನ್ನೂ ಕೇಳುವ ಅಗತ್ಯವಿಲ್ಲ. ನನ್ನ ಟಿಕೆಟ್ ಅಂತಿಮವಾಗಿದೆ. ಬೇರೆಯವರು ಬಯಸಿದರೆ ಇನ್ನೊಂದು ಟಿಕೆಟ್ ಪಡೆಯಬಹುದು ಎಂದು ನಗೆ ಚಟಾಕಿ ಹಾರಿಸಿದರು.

ಆನಂದ್ ಸಿಂಗ್ ದಂಗಿ 1991, 2005, 2009 ಮತ್ತು 2014ರಲ್ಲಿ ಮೆಹಮ್ ವಿಧಾನಸಭಾ ಸ್ಥಾನದಿಂದ ಶಾಸಕರಾಗಿದ್ದಾರೆ. ಮೆಹಮ್ ಕ್ಷೇತ್ರದಲ್ಲಿ ಆನಂದ್ ಸಿಂಗ್ ದಂದಿ ಪ್ರಾಬಲ್ಯವಿದೆ. ಹಗರಣ ಒಂದಲ್ಲಿ ಸಿಲುಕಿದ್ದ ದಂಗಿ ಅವರು 2014ರ ವಿಧಾನಸಭಾ ಚುನಾವಣೆಯಲ್ಲಿ ಚೌತಲಾ ಕುಟುಂಬದ ವಿರುದ್ಧ ಸ್ಪರ್ಧಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅಲೆಯ ಹೊರತಾಗಿಯೂ, ಅವರು ಗೆಲುವು ಸಾಧಿಸಿದ್ದರು.

ಹರ್ಯಾಣದ ಮಾಜಿ ಸಿಎಂ ಭೂಪೇಂದ್ರ ಸಿಂಗ್ ಹೂಡಾ ಅವರ ಪತ್ನಿ ಆಶಾ ಹೂಡಾ ಮೆಹಮ್ ಕ್ಷೇತ್ರದ ಟಿಕೆಟ್ ಪಡೆಯಲು ಲಾಬಿ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವಿಚಾರ ತಿಳಿದ ದಂಗಿ ಅವರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮುನ್ನವೇ ನಾಮಪತ್ರ ಸಲ್ಲಿಸಿ ಬಿಗ್ ಶಾಕ್ ನೀಡಿದ್ದಾರೆ.

Comments

Leave a Reply

Your email address will not be published. Required fields are marked *