ರಾತ್ರಿ ಆಸ್ಪತ್ರೆಗೆ ಕೈ ನಾಯಕರ ಭೇಟಿ- ಒಂದೂವರೆ ಗಂಟೆ ಆನಂದ್ ಸಿಂಗ್ ಜೊತೆ ಚರ್ಚೆ

ಬೆಂಗಳೂರು: ತಡರಾತ್ರಿ ಅಪೋಲೋ ಆಸ್ಪತ್ರೆ ಅಕ್ಷರಶಃ ಕಾಂಗ್ರೆಸ್ ನಾಯಕರಿಂದ ತುಂಬಿಹೋಗಿತ್ತು. ಈಗಲ್ಟನ್ ರೆಸಾರ್ಟ್ ನಲ್ಲಿ ನಡೆದ ಗಲಾಟೆಯಲ್ಲಿ ಹಲ್ಲೆಗೊಳಗಾದ ಶಾಸಕ ಆನಂದ್ ಸಿಂಗ್ ಆರೋಗ್ಯ ವಿಚಾರಿಸಲು ತಡರಾತ್ರಿ ಕಾಂಗ್ರೆಸ್ ನಾಯಕರ ದಂಡೇ ಆಸ್ಪತ್ರೆಗೆ ಹರಿದು ಬಂದಿತ್ತು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಗೃಹಸಚಿವ ಎಂ.ಬಿ ಪಾಟೀಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಡಿ.ಕೆ ಶಿವಕುಮಾರ್, ಸಚಿವ ದೇಶಪಾಂಡೆ, ಸಚಿವ ಜಮೀರ್ ಅಹಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಂಸದರಾದ ಡಿ.ಕೆ ಸುರೇಶ್, ಉಗ್ರಪ್ಪ ತಡರಾತ್ರಿ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಆನಂದ್ ಸಿಂಗ್ ಆರೋಗ್ಯ ವಿಚಾರಿಸಿದ್ದಾರೆ.

ಮಧ್ಯರಾತ್ರಿ 12 ಗಂಟೆಗೆ ಆಸ್ಪತ್ರೆಗೆ ಬಂದ ಕಾಂಗ್ರೆಸ್ ಘಟಾನುಘಟಿ ನಾಯಕರು ಸರಿಸುಮಾರು ಒಂದೂವರೆ ಗಂಟೆಗಳ ಕಾಲ ಆನಂದ್ ಸಿಂಗ್ ಜೊತೆ ಮಾತುಕತೆ ನಡೆಸಿದ್ದಾರೆ. ಹಾಗೆಯೇ ಅವರ ಆರೋಗ್ಯ ವಿಚಾರಿಸಿ ಹೊರಬಂದ ರಾಜ್ಯ ನಾಯಕರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲಿಲ್ಲ. ಕೊನೆಗೆ ಮಾತನಾಡಿದ ಸಂಸದ ಡಿಕೆ ಸುರೇಶ್, ಆನಂದ್ ಸಿಂಗ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಎದೆನೋವು ಕಡಿಮೆ ಆಗಿದೆ. ನಮ್ಮ ನಾಯಕರೆಲ್ಲ ಬಂದು ಆರೋಗ್ಯ ವಿಚಾರಿಸಿದ್ದಾರೆ. ನಾವೆಲ್ಲಾ ಅವರ ಜೊತೆ ಇದ್ದೇವೆ. ಅವರ ಕುಟುಂಬದವರ ಜೊತೆಗೂ ಮಾತನಾಡಿದ್ದೇವೆ. ಪೊಲೀಸರಿಗೆ ದೂರು ನೀಡುವುದು ಅವರ ಕುಟುಂಬಕ್ಕೆ ಬಿಟ್ಟ ವಿಚಾರವಾಗಿದ್ದು ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.

ನಂತರ ಜಮೀರ್ ಅಹಮದ್ ಏನು ಹೇಳಿದ್ದಾರೆ ಅಂತ ಗೊತ್ತಿಲ್ಲ. ಆನಂದ್ ಸಿಂಗ್ ಅವರೇ ಈಗ ಮಾತನಾಡುತ್ತಿದ್ದಾರೆ. ಪೊಲೀಸರು ಕೂಡ ಬಂದಿದ್ದರು. ಆದ್ರೆ ವೈದ್ಯರು ಸದ್ಯಕ್ಕೆ ಮಾಹಿತಿ ನೀಡುವ ಪರಿಸ್ಥಿತಿ ಇಲ್ಲ ಅಂತ ಹೇಳಿದ್ದರಿಂದ ವಾಪಸ್ ಹೋಗಿದ್ದಾರೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *