ಟಿವಿ ಲೈವ್ ವೇಳೆ ಜಟಾಪಟಿ – ಬಿಜೆಪಿ ಮುಖಂಡನ ಮೇಲೆ ನೀರೆರಚಿದ ಕಾಂಗ್ರೆಸ್ ನಾಯಕ

ನವದೆಹಲಿ: ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಎಲ್ಲ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷದ ವಕ್ತಾರರು ಖಾಸಗಿ ಸುದ್ದಿ ವಾಹಿನಿಗಳು ನಡೆಸುವ ಡಿಬೇಟ್ ನಲ್ಲಿ ಭಾಗಿಯಾಗುವ ಮೂಲಕ ತಮ್ಮ ಪಕ್ಷವನ್ನು ಪ್ರತಿನಿಧಿಸುತ್ತಾರೆ. ಡಿಬೇಟ್ ನಲ್ಲಿ ಎಲ್ಲ ಪಕ್ಷದ ಮುಖಂಡರನ್ನು ಒಂದೇ ವೇದಿಕೆಯಲ್ಲಿರಿಸಿ ಚುನಾವಣೆಗೆ ಸಂಬಂಧಿಸಿದ ವಿಷಯಗಳ ಕುರಿತಾಗಿ ಚರ್ಚೆ ನಡೆಸಲಾಗುತ್ತದೆ.

ಖಾಸಗಿ ವಾಹಿನಿಯ ಚರ್ಚೆಯೊಂದರಲ್ಲಿ ಕಾಂಗ್ರೆಸ್ ನಾಯಕ ಕೋಪದಲ್ಲಿ ಬಿಜೆಪಿ ಮುಖಂಡನ ಮೇಲೆ ನೀರು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಬಿಜೆಪಿ ತನ್ನ ಟ್ವಿಟ್ಟರ್ ನಲ್ಲಿ ಹಾಕಿಕೊಂಡು ಕಾಂಗ್ರೆಸ್ ನಾಯಕನ ನಡೆಯ ಬಗ್ಗೆ ಕಿಡಿಕಾರಿದೆ.

ಬಿಜೆಪಿ ಟ್ವೀಟ್: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪದಗಳಲ್ಲಿಯೇ ಗೂಂಡಾ ವರ್ತನೆಯನ್ನು ತೋರಿಸುತ್ತಾರೆ. ಅವರದೇ ಪಕ್ಷದ ವಕ್ತಾರನೋರ್ವ ಚರ್ಚೆಯಲ್ಲಿ ಹಿಂಸೆಯ ಮೂಲಕ ಉತ್ತರ ನೀಡುತ್ತಾರೆ. ವಾಹಿನಿಯ ನೇರಪ್ರಸಾರದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ವಕ್ತಾರ ಅಲೋಕ್ ಶರ್ಮಾ, ಬಿಜೆಪಿಯ ಕೆ.ಕೆ.ಶರ್ಮಾ ಮೇಲೆ ಗ್ಲಾಸ್ ಎಸೆದಿದ್ದಾರೆ. ಸೋಲಿನ ಹತಾಶೆಯಲ್ಲಿ ಕೈ ನಾಯಕರು ಈ ರೀತಿ ಮಾಡುತ್ತಿದ್ದಾರೆ ಎಂದು ಬಿಜೆಪಿ ವ್ಯಂಗ್ಯ ಮಾಡಿದೆ.

ನಡೆದಿದ್ದೇನು?
ಖಾಸಗಿ ವಾಹಿನಿಯ ನೇರ ಪ್ರಸಾರದ ಡಿಬೇಟ್ ನಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಕೆಲವು ರಾಜಕೀಯ ಮುಖಂಡರು ಭಾಗಿಯಾಗಿದ್ದರು. ಈ ವೇಳೆ ಬಿಜೆಪಿ ಕೆ.ಕೆ.ಶರ್ಮಾ, ಕಾಂಗ್ರೆಸ್ ನಾಯಕನನ್ನು ಉದ್ದೇಶಿಸಿ ದೇಶದ್ರೋಹಿ ಎಂಬ ಪದ ಬಳಕೆ ಮಾಡಿದರು. ದೇಶದ್ರೋಹಿ ಪದ ಬಳಕೆ ಮಾಡುತ್ತಲೇ ಆಕ್ರೋಶಗೊಂಡ ಕೈ ನಾಯಕ ಟೇಬಲ್ ಮೇಲಿದ್ದ ಗ್ಲಾಸ್ ಶರ್ಮಾ ಮೇಲೆ ಎಸೆದರು. ಗ್ಲಾಸ್ ನಲ್ಲಿದ್ದ ನೀರು ನಿರೂಪಕರ ಮೇಲೆ ಸಹ ಬಿತ್ತು.

ಕೊನೆಗೆ ಇಬ್ಬರು ನಾಯಕರನ್ನು ಸಮಾಧಾನ ಮಾಡುವ ಕೆಲಸವನ್ನು ನಿರೂಪಕ ಮಾಡಿದ್ದಾರೆ. ಘಟನೆ ಬಳಿಕ ದೇಶದ್ರೋಹ ಪದ ಬಳಕೆ ಮಾಡಿದ್ದಕ್ಕೆ ಕೆ.ಕೆ.ಶರ್ಮಾ ಕ್ಷಮೆ ಕೇಳಿದ ನಂತರ ಅಲೋಕ್ ಶರ್ಮಾ ಸಹ ಕ್ಷಮೆಯಾಚಿಸಿದ್ದಾರೆ.

Comments

Leave a Reply

Your email address will not be published. Required fields are marked *