ದೋಸ್ತಿ ಮುಗಿದ ಮೇಲೆ ಇವರಿಗ್ಯಾಕೆ ಅವ್ರ ಉಸಾಬರಿ: ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಕಿಡಿ

– ಏನಾಗುತ್ತೋ ಆಗ್ಲಿ ಎಂದು ಗುಟುರು ಹಾಕಿದ ಟಗರು!
– ಜೋಡೆತ್ತುಗಳ ವಿರುದ್ಧ ಸಿದ್ದರಾಮಯ್ಯ ಫುಲ್ ಗರಂ

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾದರೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ನಡುವಿನ ಒಡನಾಟಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಫುಲ್ ಗರಂ ಆಗಿದ್ದಾರೆ.

ಕಾವೇರಿ ನಿವಾಸದಲ್ಲಿ ಕುಳಿತು ಸಿದ್ದರಾಮಯ್ಯ ತಮ್ಮದೇ ಜಾತಿ ಸಮೀಕರಣ ಲೆಕ್ಕ ಹಾಕಿ ಮಾತುಗಳನ್ನಾಡಿದ್ದಾರೆ. ಲಿಂಗಾಯತರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆಗಿಲ್ಲ. ಒಕ್ಕಲಿಗರು ಮಾಜಿ ಸಿಎಂ ಕುಮಾರಸ್ವಾಮಿ ಜೊತೆಗಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಡಿ.ಕೆ.ಶಿವಕುಮಾರ್ ಹಾಗೂ ಕುಮಾರಸ್ವಾಮಿ ವಿಚಾರವಾಗಿಯೂ ಮಾತನಾಡಿದ್ದಾರೆ.

ಸಿದ್ದರಾಮಯ್ಯ ಅವರು ತಮ್ಮ ಆಪ್ತರಾದ ಮಾಜಿ ಶಾಸಕರಾದ ಪಿರಿಯಪಟ್ಟಣ ವೆಂಕಟೇಶ್ ಹಾಗೂ ಹುಣಸೂರು ಮಂಜುನಾಥ್ ಜೊತೆ ಕುಳಿತು ಮಾತನಾಡಿದ್ದಾರೆ. ಅವರ ಎಕ್ಸ್ ಕ್ಲೂಸಿವ್ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಸಿದ್ದರಾಮಯ್ಯ ಅವರ ಮಾತುಗಳ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ.

ವಿಡಿಯೋದಲ್ಲಿ ಏನಿದೆ?:
ಹುಣಸೂರು ಮಂಜುನಾಥ್ ಅವರು ಮಾತು ಆರಂಭಿಸಿ, ಲಿಂಗಾಯತ ಕಮ್ಯೂನಿಟಿ ಬಿಜೆಪಿ ಮೇಲೆ ಸ್ವಲ್ಪ ಡಿಸ್ಟರ್ಬ್ ಆಗಿದ್ದಾರೆ ಸರ್ ಎಂದರು. ಆಗ ಸಿದ್ದರಾಮಯ್ಯ, ಲಿಂಗಾಯತರು ಯಡಿಯೂರಪ್ಪಗೆ ಮೊದಲಿನ ತರ ಇರಲ್ಲಾ. ಒಕ್ಕಲಿಗರು ಕುಮಾರಸ್ವಾಮಿಗೆ ಮೊದಲಿನ ತರ ಇರಲ್ಲಾ ಎಂದರು.

ಈ ಮಧ್ಯೆ ಧ್ವನಿಗೂಡಿಸಿದ ಪಿರಿಯಾಪಟ್ಟಣ ವೆಂಕಟೇಶ್, ಅದು ಸರಿ. ಆದರೆ ಎನ್ ಕ್ಯಾಶ್ ಮಾಡಿಕೊಳ್ಳೋಕೆ ನಮ್ಮವರೆ ತಯಾರಿಲ್ವಲ್ಲ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಕರೆಕ್ಟ್ ಎಂದು ಹೇಳಿದರು.

ಮಾತು ಮುಂದುರಿಸಿದ ವೆಂಕಟೇಶ್ ಅವರು, ಡಿ.ಕೆ.ಶಿವಕುಮಾರ್ ಜೆಡಿಎಸ್ ಬಾವುಟ ಹಿಡಿಯುತ್ತಾರೆ ಅಂದ್ರೆ ಏನರ್ಥ ಎಂದು ಪ್ರಶ್ನಿಸಿದರು. ಆಗ ಸಿದ್ದರಾಮಯ್ಯನವರು, ಅದು ಹೌದು, ಏನು ಅರ್ಥ? ಬರುವಾಗ ಜೆಡಿಎಸ್ ಕಾಂಗ್ರೆಸ್ ಬಾವುಟ ಹಿಡಿದುಕೊಂಡು ಬಂದ್ರು ಏನ್ ಹೇಳೋದು. ಏನು ಅರ್ಥ ಎಂದು ಅಸಮಾಧಾನ ಹೊರ ಹಾಕಿದರು. ಇದಕ್ಕೆ ಪಿರಿಯಪಟ್ಟಣ ವೆಂಕಟೇಶ್, ಏನ್ ಹೇಳೋದು ಎಂದು ಕುಟುಕಿದರು.

ನಾನು ನಿನ್ನೆ ಗದಗ್‍ನಲ್ಲಿ ಹೇಳಿ ಬಂದಿದ್ದೇನೆ. ಜೆಡಿಎಸ್‍ನವರ ಸಹವಾಸ ಇನ್ನು ಇಲ್ಲಾ ಅಂದಿದ್ದೀನೆ ಎಂದು ಸಿದ್ದರಾಮಯ್ಯ ಧ್ವನಿಗೂಡಿಸಿದರು. ಈ ವೇಳೆ ವೆಂಕಟೇಶ್ ಅವರು, ನೀವೆಲ್ಲಾ ಸ್ಟಿಕ್ಕಾನ್ ಆಗಬೇಕು. ಏನು ಆಗುತ್ತೋ ಆಗ್ಲಿ ಎಂದರು. ಆಗ ಸಿದ್ದರಾಮಯ್ಯನವರು ಕೂಡ, ಏನು ಆಗುತ್ತೋ ಆಗ್ಲಿ ಎಂದು ಗುಡುಗಿದರು.

Comments

Leave a Reply

Your email address will not be published. Required fields are marked *